ADVERTISEMENT

17,857 ಕೋಟಿ ರೂ ರಾಜ್ಯ ಕೃಷಿ ಬಜೆಟ್ ಮಂಡನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 8:45 IST
Last Updated 24 ಫೆಬ್ರುವರಿ 2011, 8:45 IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೇಶದಲ್ಲಿಯೇ ಪ್ರಥಮ ಬಾರಿಗೆ, ರಾಜ್ಯದ  17,857 ಕೋಟಿ ರೂಗಳ ಕೃಷಿ ಬಜೆಟ್ ನ್ನು ಗುರುವಾರ ಬೆಳಿಗ್ಗೆ ವಿಧಾನಸೌಧದಲ್ಲಿ ಮಂಡಿಸುವುದರೊಂದಿಗೆ ಪ್ರಸಕ್ತ  2011-12ರ ಸಾಲಿಗೆ ರಾಜ್ಯದ ರೈತರಿಗಾಗಿ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ.

ಯಡಿಯೂರಪ್ಪ  ಅವರು, ತಮ್ಮ ಅಧಿಕೃತ ನಿವಾಸದಿಂದ ಸುಮಾರು ಐದು ಸಾವಿರ ರೈತರೊಂದಿಗೆ ಚಾಲುಕ್ಯ ವೃತ್ತದವರೆಗೆ ಮೆರವಣಿಗೆ ನಡೆಸುವುದರ ಮೂಲಕ ಕೃಷಿ ಬಜೆಟ್ ಗೆ  ರಂಗು ನೀಡಿದರು.

ವಿಧಾನಸೌಧವನ್ನು ಪ್ರವೇಶಿಸಿದ ಮುಖ್ಯಮಂತ್ರಿಗಳನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನ ಎಚ್.ಡಿ. ರೇವಣ್ಣ ಸೇರಿದಂತೆ ಹಲವು ಮುಖಂಡರ ಪ್ರಥಮ ಕೃಷಿ ಬಜೆಟ್ ಮಂಡನೆಗಾಗಿ ಅಭಿನಂದಿಸಿದರು.

ರೈತರ ಏಳಿಗೆ, ಅಭಿವೃದ್ಧಿಯನ್ನು ಗಮನದಲ್ಲಿಟ್ಟು ಕೊಂಡು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಸೂಕ್ತ ಹಣಕಾಸು ನೆರವು ನೀಡುವ ಉದ್ದೇಶದಿಂದ ಈ ಕೃಷಿ ಬಜೆಟ್ ನ್ನು ತಯಾರಿಸಿಸಲಾಗಿದೆ ಎನ್ನುತ್ತಾ , ~ಉಳುವಾ ಯೋಗಿಯ ನೋಡಲ್ಲಿ~ ಕುವೆಂಪು ಅವರ ಕವನದ ಸಾಲನ್ನು ವಾಚಿಸುವುದರ ಮೂಲಕ ಅವರು ಕೃಷಿ ಬಜೆಟ್ ಮಂಡಿಸಿದರು.

ADVERTISEMENT

ಬಜೆಟ್ ವಿವರ: ನೀರಾವರಿ ವಲಯಕ್ಕೆ ಆದ್ಯತೆ. ಕೃಷಿ ಯಂತ್ರ ಸಹಾಯಧನ 100 ಕೋಟಿ ರೂ. ನೀಡಿಕೆ, ಶೇ 1ರ ಬಡ್ಡಿ ದರದಲ್ಲಿ ಕೃಷಿ ಸಾಲ, ಜೈವಿಕ ಇಂಧನ ಪ್ರೋತ್ಸಾಹಕ್ಕೆ 125 ಕೋಟಿ ರೂ. ಮೀಸಲು, ~ಭೂ ಚೇತನ~ ಕಾರ್ಯಕ್ರಮ 30 ಜಿಲ್ಲೆಗಳಿಗೆ ವಿಸ್ತರಣೆಗೆ 40 ಕೋಟಿ ರೂ ನಿಗದಿ, ಗುಣಮಟ್ಟದ ಬೀಜಕ್ಕೆ 60 ಕೋಟಿ ನೀಡಿಕೆ, ಕೃಷಿ ಆವರ್ತ ನಿಧಿ 1000 ಕೋಟಿ ರೂ. ಹೆಚ್ಚಳ, ನಿರಾವರಿ ಪಂಪ್ ಸೆಟ್ ಗೆ ಗುಣಮಟ್ಟದ ವಿದ್ಯುತ್ ನೀಡಿಕೆ, ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಮೂಲ ಸೌಕರ್ಯ ಒದಗಿಸುವಿಕೆ, ಕೆರೆಗಳ ಅಭಿವೃದ್ಧಿಗೆ ಸಾವಿರ ಕೋಟಿ ಮೀಸಲು, ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಬಡ್ಡಿ ರಹಿತ ಸಾಲ ನೀಡಿಕೆ, ಸಹಾಕಾರಿ ಸಂಘದ ಮೂಲಕ ಕೃಷಿ ಸಾಲ, ಹನಿ ನೀರಾವರಿಗೆ ಆದ್ಯತೆ, ಹಳೆಯ ಅಣೆಕಟ್ಟುಗಳ ಆಧುನೀಕರಣ, ಪಶು ಸಂಗೋಪನೆಗೆ ಆದ್ಯತೆ, ಸಾವಯುವ ಕೃಷಿಗೆ 200 ಕೋಟಿ ರೂ. ಮೀಸಲು, 1 ಲಕ್ಷ ಅಕ್ರಮ ಪಂಪ್ ಸೆಟ್ಟುಗಳ ಸಕ್ರಮಕ್ಕೆ 100 ಕೋಟಿ, ನೀರಾವರಿ ವಲಯಕ್ಕೆ 2011-12ರಲ್ಲಿ 7,800 ಕೋಟಿ ರೂ. ವೆಚ್ಚ, ಗ್ರಾಮೀಣ ಪ್ರದೇಶದ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ, 50 ಮೀನು ಮಾರುಕಟ್ಟೆಗಳ ನಿರ್ಮಾಣಕ್ಕೆ 5 ಕೋಟಿ ರೂ. ಸಣ್ಣ ಬಂದರುಗಳ ನಿರ್ಮಾಣಕ್ಕೆ 100 ಕೋಟಿ ರೂ, ಉಗ್ರಾಣಗಳ ನಿರ್ಮಾಣಕ್ಕೆ 100 ಕೋಟಿ ರೂ  ಹೀಗೆ ಇನ್ನೂ ಹಲವಾರು ಯೋಜನೆಗಳಿಗೆ ಹಣ ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.