ಬೆಂಗಳೂರು: ರಾಜ್ಯ ಸರ್ಕಾರಿ ಸೇವೆ ಯಲ್ಲಿರುವ ಮಹಿಳೆಯರಿಗೆ ನೀಡುವ ಹೆರಿಗೆ ರಜೆಯನ್ನು 135ರಿಂದ 180 ದಿನಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಅಧಿಕಾರಿಗಳ 6ನೇ ವೇತನ ಸಮಿತಿ ಮಾಡಿದ ಶಿಫಾರಸು ಆಧರಿಸಿ, ಏಪ್ರಿಲ್ ಒಂದರಿಂದಲೇ ಪೂರ್ವಾನ್ವಯವಾಗುವಂತೆ ಆದೇಶ ಹೊರಡಿಸಲಾಗಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಗಳ 135(1) ನಿಬಂಧನೆಗಳಿಗೆ ಒಳ ಪಟ್ಟು ಮಹಿಳಾ ನೌಕರರಿಗೆ ನೀಡುವ ರಜೆ ಅವಧಿ ಹೆಚ್ಚಿಸಲಾಗಿದೆ.
ಈ ಸಾಲಿನ ಏಪ್ರಿಲ್ ಒಂದು ಅಥವಾ ಆ ನಂತರ ಹೆರಿಗೆ ರಜೆ ಮೇಲೆ ತೆರಳಿರುವ ನೌಕರರು 180 ದಿನಗಳ ಹೆರಿಗೆ ರಜೆ ಸೌಲಭ್ಯ ಪಡೆಯಲು ಅರ್ಹರು. ಇದಕ್ಕೂ ಮೊದಲೇ ಹೆರಿಗೆ ರಜೆ ಮೇಲೆ ತೆರಳಿ, ಏಪ್ರಿಲ್ ಒಂದರ ನಂತರವೂ ರಜೆ ಮುಂದುವರಿಸಿರುವ ನೌಕರರು ಸಹ 180 ದಿನಗಳ ರಜೆ ಸೌಲಭ್ಯ ಪಡೆಯಲು ಅವಕಾಶವಿದೆ.
ಆದರೆ ಹೆರಿಗೆ ರಜೆಯನ್ನು 135 ದಿನ ಪೂರೈಸಿ, ಏಪ್ರಿಲ್ ಒಂದರಿಂದ ಬೇರೆ ಬಗೆಯ ರಜೆ ಮೇಲೆ ಇರುವ ನೌಕರರು 180 ದಿನಗಳ ರಜೆ ಸೌಲಭ್ಯ ಪಡೆಯಲು ಅರ್ಹರಲ್ಲ. ಕೇಂದ್ರ ಸರ್ಕಾರಿ ಸೇವೆಯಲ್ಲಿರುವ ಮಹಿಳೆ ಯರು ಈಗಾಗಲೇ 180 ದಿನಗಳ ಹೆರಿಗೆ ರಜೆ ಸೌಲಭ್ಯ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.