ADVERTISEMENT

19 ಲಕ್ಷ ಶೌಚಾಲಯ ನಾಪತ್ತೆ!

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2013, 19:30 IST
Last Updated 10 ಅಕ್ಟೋಬರ್ 2013, 19:30 IST

ಬೆಂಗಳೂರು: ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ 19 ಲಕ್ಷ ಶೌಚಾಲಯಗಳು ನಾಪತ್ತೆಯಾಗಿವೆ.

‘ದಾಖಲೆಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ 44 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಈ ಪೈಕಿ 19 ಲಕ್ಷ ಶೌಚಾಲಯಗಳು ಅಸ್ತಿತ್ವ­ದಲ್ಲೇ ಇಲ್ಲ. ಕೇವಲ ದಾಖಲೆಗಳಲ್ಲಷ್ಟೇ ಈ ಶೌಚಾಲ­ಯ­ಗಳಿವೆ’ ಎಂದು  ಗ್ರಾಮೀಣಾಭಿವೃದ್ಧಿ ಎಚ್‌.ಕೆ.­ಪಾಟೀಲ ತಿಳಿಸಿದರು.

ಗುರುವಾರ ಕೆಪಿಸಿಸಿ ಕಚೇರಿಗೆ ಭೇಟಿನೀಡಿ ಪಕ್ಷದ ಕಾರ್ಯಕರ್ತರ ಜೊತೆ ಸಂವಾದ ನಡೆಸಿದ ಬಳಿಕ ಪತ್ರಕರ್ತರ ಜೊತೆ ಅವರು ಮಾತನಾಡಿದರು.

ಗಾಳಿ ಬಳಕೆಯ ಶೌಚಾಲಯ: ನೀರಿನ ಲಭ್ಯತೆ ಕಡಿಮೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಗಾಳಿಯ ಒತ್ತಡದಿಂದ ಕಾರ್ಯನಿರ್ವಹಿಸುವ ಶೌಚಾಲಯ­ಗಳನ್ನು (ಪ್ರೆಷರ್‌ ಅಸಿಸ್ಟೆಡ್‌ ಟಾಯ್ಲೆಟ್‌) ನಿರ್ಮಿಸಲು ಇಲಾಖೆ ಚಿಂತನೆ ನಡೆಸಿದೆ.

ಕಡಿಮೆ ವೆಚ್ಚದಲ್ಲಿ ಈ ರೀತಿಯ ಶೌಚಾಲಯಗಳನ್ನು ನಿರ್ಮಿಸುವ ವಿಧಾನಗಳ ಕುರಿತು ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ಅಧ್ಯಯನ ನಡೆಸುತ್ತಿದೆ. ಈ ವರ್ಷ ಆರು ಲಕ್ಷ ಶೌಚಾಲಯ­ಗಳನ್ನು ನಿರ್ಮಿಸುವ ಗುರಿಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಹೊಂದಿದೆ ಎಂದರು.

ಬಿಜೆಪಿ ಆಡಳಿತದ ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ₨ 3,500 ಕೋಟಿ ಅನುದಾನವನ್ನು ಬಳಕೆ ಮಾಡದೇ ಉಳಿಸಲಾಗಿತ್ತು. ಬಳಕೆ ಮಾಡಿದ ಅನುದಾನವನ್ನೂ ಮನಸ್ಸಿಗೆ ಬಂದಂತೆ ಹಂಚಿಕೆ ಮಾಡಲಾಗಿತ್ತು ಎಂದು ದೂರಿದರು.

ಆಸ್ತಿ ನೋಂದಣಿ ತೊಡಕು ನಿವಾರಣೆ: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಆಸ್ತಿಗಳ ನೋಂದಣಿ ಪ್ರಕ್ರಿಯೆಯನ್ನು ಸರಾಗವಾಗಿ ನಡೆಸಲು ಅಗತ್ಯ ಕ್ರಮ­ಗಳನ್ನು ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಚಿವರು ಭರವಸೆ ನೀಡಿದರು.

‘ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ನೋಂದಣಿಗೆ ಕಂಪ್ಯೂಟರ್‌ ಮೂಲಕ ಪಡೆದ ನಮೂನೆ 9 ಮತ್ತು 11ರ ಬಳಕೆ ಕಡ್ಡಾಯಗೊಳಿಸಲಾಗಿದೆ. ಎಲ್ಲಾ ಪಂಚಾಯಿತಿಗಳಲ್ಲೂ ಶೀಘ್ರವಾಗಿ ಈ ದಾಖಲೆಗಳನ್ನು ವಿತರಿಸಲು ಅಗತ್ಯ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದರು.

ಸಚಿವರ ಜೊತೆಗಿನ ಸಂವಾದದ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು, ಗ್ರಾಮ ಪಂಚಾಯಿತಿಗಳ ವ್ಯಾಪ್ತಿ­ಯಲ್ಲಿನ ಆಸ್ತಿ ನೋಂದಣಿಯಲ್ಲಿ ಆಗಿರುವ ಗೊಂದಲ ನಿವಾರಿಸುವಂತೆ ಒತ್ತಾಯಿಸಿದರು. ಈಗ ಉಂಟಾ­ಗಿರುವ ಗೊಂದಲದ ಪರಿಣಾಮವಾಗಿ ಗ್ರಾಮೀಣ ಪ್ರದೇಶದ ಜನರು ತೀವ್ರ ತೊಂದರೆಗೆ ಒಳಗಾಗಿದ್ದಾರೆ ಎಂದೂ ದೂರಿದರು.

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಸ್ಥಿರಾಸ್ತಿಗಳ ನೋಂದಣಿಗೆ ಗ್ರಾಮ ಪಂಚಾಯಿತಿಗಳು ಕಂಪ್ಯೂಟರ್‌ ಮೂಲಕ ವಿತರಿಸಿದ ದಾಖಲೆಗಳನ್ನು ಬಳಸುವುದನ್ನು ಕಡ್ಡಾಯಗೊಳಿಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಇತ್ತೀಚೆಗೆ ಆದೇಶ ಹೊರಡಿಸಿತ್ತು.

ಆದರೆ, ಹಲವು ಗ್ರಾಮ ಪಂಚಾಯತಿಗಳಲ್ಲಿ ಕಂಪ್ಯೂಟರ್‌ ಮೂಲಕ ದಾಖಲೆ ವಿತರಿಸುವ ವ್ಯವಸ್ಥೆಯೇ ಇಲ್ಲದ ಕಾರಣದಿಂದ ಸಮಸ್ಯೆ ಸೃಷ್ಟಿಯಾಗಿದೆ. ಬೆಂಗಳೂರು ನಗರದ ಹೊರವಲಯದ ಪ್ರದೇಶಗಳು ಹಾಗೂ ಪ್ರಮುಖ ನಗರಗಳ ಸುತ್ತಮುತ್ತಲಿನಲ್ಲಿ ಆಸ್ತಿಗಳ ನೋಂದಣಿಗೆ ತೊಡಕಾಗಿದೆ.

ಮೊದಲ ಭೇಟಿ
ಎಲ್ಲ ಸಚಿವರೂ ಕೆಪಿಸಿಸಿ ಕಚೇರಿಗೆ ಅಗಾಗ ಭೇಟಿ ನೀಡಿ ಪಕ್ಷದ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಈ ಹಿಂದೆ ಸೂಚನೆ ನೀಡಿದ್ದರು. ಅದರಂತೆ ಎಚ್‌.ಕೆ.ಪಾಟೀಲ ಅವರು ಗುರುವಾರ ಪಕ್ಷದ ಕಚೇರಿಗೆ ಭೇಟಿ ನೀಡಿದ್ದರು. ಸಚಿವರಾದ ಬಳಿಕ ಪಕ್ಷದ ಕಚೇರಿಗೆ ಇದು ಅವರ ಮೊದಲ ಭೇಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.