ADVERTISEMENT

ಕೆಪಿಎಸ್‌ಸಿ: 1998ರ ಆಯ್ಕೆ ಪಟ್ಟಿ ಮತ್ತೆ ಪರಿಷ್ಕರಣೆ

ಹಿಂಬಡ್ತಿ ಭೀತಿಯಲ್ಲಿದ್ದ 3 ಐಎಎಸ್‌ ಅಧಿಕಾರಿಗಳು ನಿರಾಳ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 1:31 IST
Last Updated 6 ಡಿಸೆಂಬರ್ 2020, 1:31 IST
ಕೆಪಿಎಸ್‌ಸಿ
ಕೆಪಿಎಸ್‌ಸಿ   

ಬೆಂಗಳೂರು: ತನ್ನದೇ ಎಡವಟ್ಟಿನಿಂದ ‘ನ್ಯಾಯಾಂಗ ನಿಂದನೆ’ಯ ಅಡಕತ್ತರಿಯಲ್ಲಿ ಸಿಲುಕಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಇದೀಗ 1998ನೇ ಸಾಲಿನ 383 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಲು ನಿರ್ಧರಿಸಿದೆ. ಇದರಿಂದಾಗಿ, ‘ಹಿಂಬಡ್ತಿ’ ಆತಂಕ ಎದುರಿಸುತ್ತಿದ್ದ ಮೂವರು ಐಎಎಸ್‌ ಅಧಿಕಾರಿಗಳು ನಿರಾಳರಾಗಿದ್ದಾರೆ.

ಈ ಬಗ್ಗೆ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿರುವ ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ,‘ಉದ್ದೇಶಪೂರ್ವಕವಲ್ಲದ ತಪ್ಪಿಗೆ ಕೆಪಿಎಸ್‌ಸಿ ವಿಷಾದ ವ್ಯಕ್ತಪಡಿಸುತ್ತದೆ. ಎರಡು ತಿಂಗಳ ಒಳಗೆ ಆಯ್ಕೆ ಪಟ್ಟಿ ಪರಿಷ್ಕರಿಸಲಾಗುವುದು’ ಎಂದು ಮಾತು ಕೊಟ್ಟಿದ್ದಾರೆ.

ಏನಿದು ವಿವಾದ?:1998ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ, 2016ರ ಜೂನ್‌ 21ರಂದು ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿದ್ದ ಮೂರನೇ ಅಂಶವನ್ನು ಪಾಲಿಸುವ ವೇಳೆ ಕೆಪಿಎಸ್‌ಸಿ ಎಡವಟ್ಟು ಮಾಡಿದೆ. 91 ಸ್ಕ್ರಿ‍ಪ್ಟ್‌ಗಳ(ಉತ್ತರ ಪತ್ರಿಕೆ) ಮೂರನೇ ಮೌಲ್ಯಮಾಪನ ಅಂಕಗಳನ್ನು ಪರಿಗಣಿಸಿ ನೇಮಕಾತಿ ಪಟ್ಟಿ ಪರಿಷ್ಕರಿಸುವಂತೆ ತೀರ್ಪಿನಲ್ಲಿತ್ತು.

ADVERTISEMENT

ಆದರೆ, ಕೆಪಿಎಸ್‌ಸಿ 91 ಉತ್ತರ ಪತ್ರಿಕೆಗಳ ಬದಲು 91 ಅಭ್ಯರ್ಥಿಗಳ 119 ಉತ್ತರ ಪತ್ರಿಕೆಗಳ ಮೂರನೇ ಮೌಲ್ಯಮಾಪನ ಅಂಕಗಳನ್ನು ಪರಿಗಣಿಸಿ, 2019ರ ಆಗಸ್ಟ್ 22ರಂದು ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಇದರಿಂದಾಗಿ, ಅದಾಗಲೇ ಪರಿಷ್ಕರಿಸಿ 2018ರ ಫೆ, 28ರಂದು ಪ್ರಕಟಿಸಿದ್ದ ಆಯ್ಕೆ ಪಟ್ಟಿ ಬದಲಾಗಿ, 15 ಅಧಿಕಾರಿಗಳ ಹುದ್ದೆಗಳು ಸ್ಥಾನಪಲ್ಲಟಗೊಂಡುಲಾಭವಾದರೆ, ಅಷ್ಟೇ ಸಂಖ್ಯೆಯ ಅಧಿಕಾರಿಗಳು ಕೆಳ ಹುದ್ದೆಗೆ ಬದಲಾಗಿದ್ದರು. ಅಷ್ಟೇ ಅಲ್ಲ, ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಪಡೆದಿದ್ದ ಅಕ್ರಂ ಪಾಷಾ, ಮೀನಾ ನಾಗರಾಜ್‌ ಮತ್ತು ಶಿವಶಂಕರ್‌ ಅವರಿಗೆ ಹಿಂಬಡ್ತಿ ಆತಂಕ ಎದುರಾಗಿತ್ತು.

ಕೆಪಿಎಸ್‌ಸಿಯ ಈ ನಡೆಯನ್ನು ಪ್ರಶ್ನಿಸಿ ಚನ್ನಪ್ಪ (ಐಎಎಸ್ ಬಡ್ತಿ ನಿರೀಕ್ಷೆಯಲ್ಲಿರುವವರು) ಎಂಬುವವರು ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.'ಕೆಪಿಎಸ್‌ಸಿ 91 ಸ್ಕ್ರಿಪ್ಟ್ ಅಂದರೆ, 76 ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಮೂರನೇ ಮೌಲ್ಯಮಾಪನ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು. ಅದರ ಬದಲು, 91 ಅಭ್ಯರ್ಥಿಗಳನ್ನು ಅಂದರೆ, ಹೆಚ್ಚುವರಿಯಾಗಿ 28 ಉತ್ತರ ಪತ್ರಿಕೆಗಳ (ಒಟ್ಟು 119) ಮೂರನೇ ಮೌಲ್ಯಮಾಪನ ಅಂಕಗಳನ್ನು ಗಣನೆಗೆ ತೆಗೆದುಕೊಂಡಿದೆ. ಇದು ಹೈಕೋರ್ಟ್ ತೀರ್ಪಿನ ಉಲ್ಲಂಘನೆ' ಎಂದು ನ್ಯಾಯಾಂಗ‌ ನಿಂದನೆ ಅರ್ಜಿಯಲ್ಲಿ ದೂರಿದ್ದರು. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದ್ದ ಹೈಕೋರ್ಟ್ ಪೀಠ, ಕೆಪಿಎಸ್‌ಸಿಗೆ ನೋಟಿಸ್ ಜಾರಿ ಮಾಡಿತ್ತು.

60 ದಿನಗಳ ಕಾಲಾವಕಾಶ ಕೇಳಿದ ಕೆಪಿಎಸ್‌ಸಿ
ಇದೀಗ ಕೆಪಿಎಸ್‌ಸಿ, 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿಗೆ, ಮತ್ತೆ 1: 5 ಅನುಪಾತದಲ್ಲಿ ‘ವ್ಯಕ್ತಿತ್ವ ಪರೀಕ್ಷೆ’ಗೆ ಆಯ್ಕೆಯಾದವರ ಪಟ್ಟಿ ಸಿದ್ಧಪಡಿಸಿ, ಪಟ್ಟಿಯಲ್ಲಿ ಹೊಸತಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆ ನಡೆಸಬೇಕಿದೆ. ಈ ಬಗ್ಗೆ ಅಭ್ಯರ್ಥಿಗಳಿಗೆ ನೋಟಿಸ್‌ ನೀಡಲು ಏಳು ದಿನ ಮತ್ತು ವ್ಯಕ್ತಿತ್ವ ಪರೀಕ್ಷೆ ನಡೆಸಲು ‘ಸಂದರ್ಶನ ಮಂಡಳಿ’ ರಚಿಸಲು ಮತ್ತು ಅಂತಿಮ ಪಟ್ಟಿ ಪ್ರಕಟಿಸಲು ಕನಿಷ್ಠ 60 ದಿನಗಳ ಕಾಲಾವಕಾಶ ಅಗತ್ಯ ಇದೆ ಎಂದು ಪ್ರಮಾಣಪತ್ರದಲ್ಲಿ ಕೆಪಿಎಸ್‌ಸಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.