ADVERTISEMENT

2 ನಾಡಪಿಸ್ತೂಲ್‌, 3 ತಲವಾರು ವಶ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST

ಮಂಗಳೂರು: ದುಷ್ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿರುವ ರೌಡಿ ನಿಗ್ರಹದಳದ ಪೊಲೀಸರು, 2 ನಾಡ ಪಿಸ್ತೂಲ್‌, 3 ತಲವಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಸುರತ್ಕಲ್‌ ಕಾಟಿಪಳ್ಳ ಕೃಷ್ಣಾಪುರದ ಸಂದೀಪ್‌ ದೇವಾಡಿಗ, ಬ್ರಹ್ಮಾವರದ ಆಕಾಶ್‌, ಬಂಟ್ವಾಳ ತಾಲ್ಲೂಕು ಫರಂಗಿಪೇಟೆಯ ಚರಣ್‌ರಾಜ್‌, ಧರ್ಮಸ್ಥಳ ಕೊಲ್ಪೆ ಮನೆಯ ರಕ್ಷಿತ್‌ ಭಂಡಾರಿ ಬಂಧಿತರು. ಈ ಕುರಿತು ಸುರತ್ಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸಿಪಿ ರಾಜೇಂದ್ರಕುಮಾರ್‌ ನೇತೃತ್ವದ ತಂಡ ಖಚಿತ ಮಾಹಿತಿ ಮೇಲೆ ಕೃಷ್ಣಾಪುರ ನಾಲ್ಕನೇ ಬ್ಲಾಕ್‌ನ ಸಂದೀಪ್‌ ದೇವಾಡಿಗ ಮನೆ ಮೇಲೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಮೂರು ತಲವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂದೀಪ್‌ ನೀಡಿದ ಮಾಹಿತಿಯಂತೆ ಆತನ ಸಹಚರರಾದ ಆಕಾಶ್‌, ಚರಣ್‌ರಾಜ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆರೋಪಿಗಳು ನೀಡಿದ ಮಾಹಿತಿಯಂತೆ ರಕ್ಷಿತ್‌ನನ್ನು ಬಂಧಿಸಿದ ಪೊಲೀಸರು, ಆತನ ಬಳಿ ಇದ್ದ ಎರಡು ನಾಡ ಪಿಸ್ತೂಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

‘ಸುರತ್ಕಲ್‌ನ ಕೇಶವ್‌ ಶೆಟ್ಟಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಬೆಳಗಾವಿ ಜೈಲಿನಲ್ಲಿರುವ ಸತೀಶ್‌ ಅಲಿಯಾಸ್‌ ಸಚ್ಚು ಎಂಬಾತನ ಸೂಚನೆಯ ಮೇರೆಗೆ ಆಕಾಶ್‌ ಹಾಗೂ ಚರಣ್‌ರಾಜ್‌, ತಮ್ಮ ಬಳಿಯಿದ್ದ ನಾಡಪಿಸ್ತೂಲ್‌ ಹಾಗೂ 10 ಗುಂಡುಗಳನ್ನು ರಕ್ಷಿತ್‌ಗೆ ಹಸ್ತಾಂತರಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.