ಬೆಂಗಳೂರು: ರಾಜ್ಯದ 3.07 ಲಕ್ಷ ಮಂದಿ ಎರಡು ಆರೋಗ್ಯ ಯೋಜನೆಗಳನ್ನೂ ಬಳಸಿಕೊಂಡು ಒಟ್ಟು ₹130 ಕೋಟಿ ವೆಚ್ಚದಲ್ಲಿ ಚಿಕಿತ್ಸೆ ಪಡೆದಿರುವುದು ಆರೋಗ್ಯ ಇಲಾಖೆಯ ಪರಿಶೋಧನೆಯಿಂದ ಪತ್ತೆಯಾಗಿದೆ.
ಸಹಕಾರ ಇಲಾಖೆಯ ‘ಯಶಸ್ವಿನಿ’ ಯೋಜನೆಯ ಫಲಾನುಭವಿಗಳು, ಆರೋಗ್ಯ ಇಲಾಖೆ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ (ಎಬಿ–ಎಆರ್‌ಕೆ) ಯೋಜನೆಯಡಿಯೂ ಚಿಕಿತ್ಸೆ ಪಡೆದಿದ್ದಾರೆ. ಆರೋಗ್ಯ ಇಲಾಖೆಯು ಸಹಕಾರ ಇಲಾಖೆಯಿಂದ ಯಶಸ್ವಿನಿ ಫಲಾನುಭವಿಗಳ ಆಧಾರ್ ದತ್ತಾಂಶ ಪಡೆದು, ಎಬಿ–ಎಆರ್‌ಕೆ ಯೋಜನೆಯ ಫಲಾನುಭವಿಗಳ ಜತೆಗೆ ಹೋಲಿಕೆ ಮಾಡಿದಾಗ ಒಂದೇ ಕುಟುಂಬ ಹೀಗೆ ಎರಡು ಯೋಜನೆಯಡಿ ಚಿಕಿತ್ಸೆ ಪಡೆದಿರುವುದು ಗೊತ್ತಾಗಿದೆ.
ಎಬಿ–ಎಆರ್‌ಕೆ ಯೋಜನೆಯ ಮಾರ್ಗಸೂಚಿ ಪ್ರಕಾರ ಫಲಾನುಭವಿಗಳು ಬೇರೆ ಯಾವುದೇ ಸರ್ಕಾರಿ ಆರೋಗ್ಯ ವಿಮೆಯಡಿ ನೋಂದಣಿಯಾಗಿರಬಾರದು. ಆದ್ದರಿಂದ ಯಶಸ್ವಿನಿ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳು ಎಬಿ–ಎಆರ್‌ಕೆ ಯೋಜನೆಯಡಿ ಚಿಕಿತ್ಸೆ ಪಡೆಯಲು ಅರ್ಹರಲ್ಲ. ಇಷ್ಟಾಗಿಯೂ ಕೆಲವರು ಎರಡೂ ಯೋಜನೆಗಳ ಲಾಭ ಪಡೆದುಕೊಳ್ಳುತ್ತಿದ್ದು, ವಾರ್ಷಿಕ ₹10 ಲಕ್ಷದವರೆಗೂ ಆರೋಗ್ಯ ರಕ್ಷಣೆಗೆ ಒಳಪಡುತ್ತಿದ್ದಾರೆ. 2024–25ನೇ ಸಾಲಿನಲ್ಲಿ ಯಶಸ್ವಿನಿ ಯೋಜನೆಯ ಫಲಾನುಭವಿಗಳಲ್ಲಿ, 3.07 ಲಕ್ಷ ಮಂದಿ ಎಬಿ–ಎಆರ್‌ಕೆ ಯೋಜನೆಯಡಿ ₹130 ಕೋಟಿ ವೆಚ್ಚದಲ್ಲಿ ಚಿಕಿತ್ಸೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸಾಸ್ಟ್) ಎರಡೂ ಯೋಜನೆಗಳನ್ನು ನಿರ್ವಹಣೆ ಮಾಡುತ್ತಿದೆ. ಸಹಕಾರ ಸಂಘದ ಸದಸ್ಯರು ಹಾಗೂ ಅವರ ಕುಟಂಬದ ಸದಸ್ಯರ ಹಿತದೃಷ್ಟಿಯಿಂದ, ಸರ್ಕಾರವು 2023ರ ಜನವರಿಯಲ್ಲಿ ‘ಯಶಸ್ವಿನಿ ಸಹಕಾರ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್’ ಮೂಲಕ ಯಶಸ್ವಿನಿ ಯೋಜನೆಗೆ ಮರುಚಾಲನೆ ನೀಡಿತ್ತು. ಈ ಯೋಜನೆಯಡಿ ಫಲಾನುಭವಿಗಳು ಗರಿಷ್ಠ ₹5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆ 2018ರಲ್ಲಿ ಆರಂಭವಾಗಿದೆ. ಯೋಜನೆಯಡಿ ಬಿಪಿಎಲ್ ಕುಟುಂಬದವರಿಗೆ ವರ್ಷಕ್ಕೆ ₹5 ಲಕ್ಷದವರೆಗೆ ಆರೋಗ್ಯ ವಿಮೆಗೆ ಅವಕಾಶವಿದೆ. ಎಪಿಎಲ್ ಕುಟುಂಬದ ಸದಸ್ಯರಿಗೆ ಗರಿಷ್ಠ ₹1.50 ಲಕ್ಷ ಚಿಕಿತ್ಸಾ ವೆಚ್ಚ ನಿಗದಿ ಮಾಡಿದ್ದು, ಶೇ 30ರಷ್ಟು ಹಣವನ್ನು ಪಾವತಿಸಲಾಗುತ್ತದೆ.
ಬಹುತೇಕರು ಫಲಾನುಭವಿ: ಆಧಾರ್ ದತ್ತಾಂಶ ವಿಶ್ಲೇಷಣೆ ವೇಳೆ 35.71 ಲಕ್ಷಕ್ಕೂ ಅಧಿಕ ಮಂದಿಯ ಆಧಾರ್ ವಿವರ ಎರಡೂ ಯೋಜನೆಗಳಲ್ಲಿ ಕಂಡುಬಂದಿದೆ. ಸಹಕಾರ ಇಲಾಖೆ ನೀಡಿದ ಆಧಾರ್ ದತ್ತಾಂಶದ ಪ್ರಕಾರ, 41.51 ಲಕ್ಷ ಮಂದಿ ಯಶಸ್ವಿನಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇವರಲ್ಲಿ ಬಹುತೇಕರು ಎಬಿ–ಎಆರ್‌ಕೆ ಯೋಜನೆಯ ಫಲಾನುಭವಿಯೂ ಆಗಿದ್ದು, ನಿಗದಿತ ಯೋಜನೆಯ ಗರಿಷ್ಠ ಆರೋಗ್ಯ ವಿಮೆ ₹5 ಲಕ್ಷ ದಾಟಿದ ಬಳಿಕ ಕುಟುಂಬದ ಸದಸ್ಯರು ಇನ್ನೊಂದು ಯೋಜನೆಯ ಮೊರೆ ಹೋಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳೂ ಪ್ಯಾಕೇಜ್ ದರ ಅಧಿಕ ಇರುವ ಯೋಜನೆಗಳಡಿ ಚಿಕಿತ್ಸೆಗೆ ಆದ್ಯತೆ ನೀಡುತ್ತಿವೆ.
ಯಶಸ್ವಿನಿಯಡಿ ನೋಂದಾಯಿತ ಸದಸ್ಯರು ಯೋಜನೆಯಡಿ ಬರುವ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ತೆರಳಿ, ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಎಬಿ–ಎಆರ್‌ಕೆ ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆಯಬೇಕಾದರೆ, ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕು. ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಮಾತ್ರ ಬೇರೆ ಆಸ್ಪತ್ರೆಗೆ ಶಿಫಾರಸು ಆಧಾರದಲ್ಲಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು.
ಎಬಿ–ಎಆರ್‌ಕೆ ಅಡಿ ಚಿಕಿತ್ಸೆಗೆ ಕಡಿವಾಣ
‘ಯಶಸ್ವಿನಿ’ ಫಲಾನುಭವಿಗಳು ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ (ಎಬಿ–ಎಆರ್‌ಕೆ) ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಆರೋಗ್ಯ ಇಲಾಖೆ ಕಡಿವಾಣ ಹಾಕಿದೆ. ಫಲಾನುಭವಿಗಳು ಯಶಸ್ವಿನಿ ಯೋಜನೆಯಡಿಯೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ನಿರ್ಬಂಧವಿಲ್ಲ. ಯಶಸ್ವಿನಿ ಫಲಾನುಭವಿಯು ಚಿಕಿತ್ಸೆಗಳಿಂದ ವಂಚಿತವಾಗಬಾರದು ಎಂಬ ಕಾರಣಕ್ಕೆ ಎಬಿ–ಎಆರ್‌ಕೆ ಅಡಿಯೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶವನ್ನು ಮುಂದುವರಿಸಲಾಗಿದೆ. ‘ಎಬಿ–ಎಆರ್‌ಕೆ ಮಾರ್ಗಸೂಚಿ ಪ್ರಕಾರ ಫಲಾನುಭವಿಗಳು ಬೇರೆ ಸರ್ಕಾರಿ ಆರೋಗ್ಯ ವಿಮೆಯ ಫಲಾನುಭವಿಗಳಾಗಿರಬಾರದು. ಆದರೆ ಹಲವರು ಎರಡೂ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದರು. ಯಶಸ್ವಿನಿ ಯೋಜನೆಯ ಫಲಾನುಭವಿಯು ಎಬಿ–ಎಆರ್‌ಕೆ ಫಲಾನುಭವಿ ಕೂಡ ಆಗಿದ್ದರೆ ಯಶಸ್ವಿನಿ ಯೋಜನೆಯಡಿಯೇ ಚಿಕಿತ್ಸೆ ಪಡೆಯಬೇಕು. ಖಾಸಗಿ ಆಸ್ಪತ್ರೆಗಳು ಕೂಡ ಪ್ಯಾಕೇಜ್ ದರ ಅಧಿಕ ಇರುವ ಯೋಜನೆಯಡಿ ಚಿಕಿತ್ಸೆ ಒದಗಿಸುತ್ತಿದ್ದವು. ಆದ್ದರಿಂದ ನಿರ್ಬಂಧ ವಿಧಿಸಲಾಗಿದೆ’ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.