ADVERTISEMENT

2010ಸಾಲಿನ ಜಾನಪದ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 16:55 IST
Last Updated 19 ಫೆಬ್ರುವರಿ 2011, 16:55 IST

ಬೆಂಗಳೂರು:ಕರ್ನಾಟಕ ಜಾನಪದ ಅಕಾಡೆಮಿ 2010ನೇ ಸಾಲಿನ ಜಾನಪದ ಪ್ರಶಸ್ತಿಗಳನ್ನು ಶನಿವಾರ ಪ್ರಕಟಿಸಿದೆ.ಪ್ರಶಸ್ತಿಗೆ ಆಯ್ಕೆಯಾದ ಕಲಾವಿದರ ಹೆಸರನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅಕಾಡೆಮಿಯ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು, ‘ಪ್ರತಿ ಜಿಲ್ಲೆಗೆ ಒಬ್ಬರಂತೆ ಕಲಾವಿದರನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಈ ಬಾರಿಯ ಡಾ.ಬಿ.ಎಸ್. ಗದ್ದಗಿ ಮಠ ಪ್ರಶಸ್ತಿ ಜಾನಪದ ವಿದ್ವಾಂಸ ಡಾ.ಎಸ್.ಪಿ. ಪದ್ಮಪ್ರಸಾದ್ ಅವರಿಗೆ ಮತ್ತು ಡಾ.ಜಿ.ಶಂ. ಪರಮಶಿವಯ್ಯ ಪ್ರಶಸ್ತಿ ಡಾ.ಕೆ.ಆರ್. ಸಂಧ್ಯಾ ರೆಡ್ಡಿ ಅವರಿಗೆ ಲಭಿಸಿದೆ. ಪ್ರಶಸ್ತಿ ಪುರಸ್ಕೃತರಿಗೆ ತಲಾ 10 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು’ ಎಂದು ತಿಳಿಸಿದರು.ಜಾನಪದ ಪ್ರಶಸ್ತಿಗೆ ಆಯ್ಕೆಯಾಗಿರುವ ಕಲಾವಿದರಿಗೆ ತಲಾ ಐದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದರು. 

ಮುಧೋಳದಲ್ಲಿ ಮಾರ್ಚ್ ತಿಂಗಳಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ದಿನಾಂಕ ಇನ್ನೂ ಅಂತಿಮಗೊಂಡಿಲ್ಲ ಎಂದರು. ಜಾನಪದ ಗ್ರಂಥಗಳಿಗೆ ನೀಡುವ ಪ್ರಶಸ್ತಿ ಪಟ್ಟಿ ಇನ್ನೊಂದು ವಾರದಲ್ಲಿ ಅಂತಿಮವಾಗಲಿದೆ. ಗದ್ಯ, ಪದ್ಯ, ಸಂಶೋಧನೆ/ವಿಮರ್ಶೆ ಮತ್ತು ಸಂಕಿರಣ ಪ್ರಕಾರಗಳಲ್ಲಿ ‘ಜಾನಪದ ಗ್ರಂಥ’ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.

ಜಾನಪದ ವಿ.ವಿ: ‘ರಾಜ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಜಾನಪದ ವಿ.ವಿ.ಗೆ ಸ್ಥಳ ಪರಿಶೀಲನೆ ನಡೆದಿದೆ. ಆದರೆ ಅಂತಿಮ ಸ್ಥಳ ಇನ್ನೂ ನಿರ್ಧಾರವಾಗಿಲ್ಲ.ಗಜೇಂದ್ರಗಢ, ಹಾವೇರಿ ಸೇರಿದಂತೆ ಅನೇಕ ಸ್ಥಳಗಳನ್ನು ನೋಡಿದ್ದೇವೆ. ವಿ.ವಿ.ಯನ್ನು ಎಲ್ಲಿ ಸ್ಥಾಪಿಸಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರಕ್ಕೆ ಬಿಟ್ಟ ವಿಷಯ’ ಎಂದರು. ಜಾನಪದ ವಿ.ವಿ.ಗೆ ಈ ಬಾರಿಯ ಬಜೆಟ್‌ನಲ್ಲಿ 100 ಕೋಟಿ ರೂ. ಮೀಸಲಿಡುವಂತೆ ರಾಜ್ಯ ಸರ್ಕಾರವನ್ನು ಕೋರಲಾಗಿದೆ ಎಂದರು.

ಜಾನಪದ ಸಮ್ಮೇಳನ: ಅಖಿಲ ಭಾರತ ಜಾನಪದ ಸಮ್ಮೇಳನವನ್ನು ಏಪ್ರಿಲ್ 23ರಿಂದ 25ರವರೆಗೆ ಬೀದರ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ದೇಶದ ನಾನಾ ಭಾಗಗಳ ಜಾನಪದ ಕಲಾ ತಂಡಗಳು ಮತ್ತು ಜಾನಪದ ವಿದ್ವಾಂಸರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.‘ದೇಶದ ವಿವಿಧ ಭಾಗಗಳ ಜಾನಪದ ವಿದ್ವಾಂಸರು ಒಟ್ಟು ಸೇರಿ, ದೇಶದ ಜಾನಪದ ಭವಿಷ್ಯದ ಕುರಿತು ಒಟ್ಟಾಗಿ ಚರ್ಚಿಸುವಂತೆ ಮಾಡುವುದು ಈ ಸಮ್ಮೇಳನದ ಉದ್ದೇಶ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.