ADVERTISEMENT

21 ಆಯುರ್ವೇದ ಕಾಲೇಜು ಮುಚ್ಚಲು ಆದೇಶ: ತ್ಯಾಗಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 19:30 IST
Last Updated 13 ಅಕ್ಟೋಬರ್ 2012, 19:30 IST

ಹಾಸನ:  `ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದ ರಾಜ್ಯದ 21 ಆಯುರ್ವೇದ ಕಾಲೇಜುಗಳನ್ನು  ಪ್ರಸಕ್ತ ಸಾಲಿನಲ್ಲಿ ಮುಚ್ಚಲು ಸಿಸಿಐಎಂ ಆದೇಶ ನೀಡಿದೆ. ಇಂಥ ಕಾಲೇಜುಗಳನ್ನು ನಡೆಸಲು ಯಾವ ಕಾರಣಕ್ಕೂ ಬಿಡುವುದಿಲ್ಲ~ ಎಂದು ಭಾರತೀಯ ವ್ಯೆದ್ಯ ಪದ್ಧತಿಗಳ ಕೇಂದ್ರ ಸಮಿತಿ (ಸಿಸಿಐಎಂ) ಅಧ್ಯಕ್ಷ ಡಾ.ವೇದಪ್ರಕಾಶ ತ್ಯಾಗಿ ತಿಳಿಸಿದರು.

ಇಲ್ಲಿನ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸುವ `ಶಿಷ್ಯೋಪನಯನ~ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. `ಕೆಲವರು ಎರಡು ದಶಕಗಳಿಂದ ಆಯುರ್ವೇದದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ಬೇಕಾಬಿಟ್ಟಿ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಿದ್ದರಿಂದ ಕೆಲವರು ಇದನ್ನು ದಂಧೆ ಮಾಡಿಕೊಂಡಿದ್ದಾರೆ. ಅನೇಕ ಕಾಲೇಜುಗಳಲ್ಲಿ ಉಪನ್ಯಾಸಕರಿರಲಿಲ್ಲ, ಆಸ್ಪತ್ರೆಗಳಿಲ್ಲ.

ವಿದ್ಯಾರ್ಥಿಗಳೇ ಇಲ್ಲದೆಯೂ ಕಾಲೇಜುಗಳು ನಡೆಯುತ್ತಿದ್ದವು. ಇವನ್ನೆಲ್ಲ ನಿರ್ದಾಕ್ಷಿಣ್ಯವಾಗಿ ಮುಚ್ಚಲಾಗುವುದು. ಇಡೀ ದೇಶದಲ್ಲಿ ಪ್ರಸಕ್ತ 311 ಆಯುರ್ವೇದ ವಿದ್ಯಾಲಯಗಳಿವೆ. ಅವುಗಳಲ್ಲಿ 30 ಕಾಲೇಜುಗಳು ಉಳಿದರೂ ಬೇಸರವಿಲ್ಲ. ಆದರೆ ನಮ್ಮ ಪಾರಂಪರಿಕ ವೈದ್ಯ ಪದ್ಧತಿಯ ಹೆಸರು ಉಳಿಸುವವರಷ್ಟೇ ಈ ವೃತ್ತಿಗೆ ಬರಬೇಕು~ ಎಂದರು.

ಆಯುಶ್ ವೈದ್ಯರಿಗೆ ತುರ್ತು ಸಂದರ್ಭದಲ್ಲಿ ಅಲೋಪಥಿ ಔಷಧ ನೀಡಲು ಅನುಮತಿ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, `ಸರ್ಕಾರ ಆಯುರ್ವೇದ ಔಷಧಗಳನ್ನು ಖರೀದಿಸುತ್ತಿಲ್ಲ, ಕೆಲವು ಔಷಧಗಳು ಲಭ್ಯವೂ ಇಲ್ಲ. ಇಂಥ ಸಂದರ್ಭದಲ್ಲಿ ಒಂದೋ ಸರ್ಕಾರ ಆಯುಶ್ ವೈದ್ಯರನ್ನು ಮೂಲೆಯಲ್ಲಿ ಕೂಡಿಸಿ ಪುಕ್ಕಟೆ ವೇತನ ನೀಡಬೇಕು ಅಥವಾ ಬೇರೆ ಪದ್ಧತಿಯ ಔಷಧ ನೀಡಲು ಅನುಮತಿ ನೀಡಬೇಕು. ಈ ಬಗ್ಗೆ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕಾಗಿದೆ~ ಎಂದರು.

ಎಂ.ಆರ್.ಐ, ಸಿಟಿ ಸ್ಕ್ಯಾನ್ ಮುಂತಾದವು ವೈದ್ಯಕೀಯ ಉಪಕರಣಗಳೇ ವಿನಾ ವೈದ್ಯ ಪದ್ಧತಿಗಳಲ್ಲ, ಆಯುರ್ವೇದ ವೈದ್ಯರೂ ಇವುಗಳ ಲಾಭ ಪಡೆಯಬೇಕು. ಪ್ರಸಕ್ತ ಸಾಲಿನಿಂದ ಹೊಸ ಪಠ್ಯಕ್ರಮ ಜಾರಿ ಮಾಡಲಾಗಿದ್ದು, ಈ ಎಲ್ಲ ವಿಚಾರಗಳೂ ಅದರಲ್ಲಿ ಒಳಗೊಂಡಿದೆ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.