ADVERTISEMENT

ಬಂಡೂರಿ ಯೋಜನೆಗೆ 22 ಹೆಕ್ಟೇರ್ ಅರಣ್ಯ ಬಳಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 22:00 IST
Last Updated 21 ಫೆಬ್ರುವರಿ 2023, 22:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಹದಾಯಿ ಯೋಜನೆಯ ಬಂಡೂರಿ ನಾಲಾ ತಿರುವು ಯೋಜನೆಗೆ 22.80 ಹೆಕ್ಟೇರ್‌ ಅರಣ್ಯವನ್ನು ಬಳಸಿಕೊಳ್ಳಲು ಅನುಮೋದನೆ ನೀಡುವಂತೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾ‍‍ಪಮಾನ ಬದಲಾವಣೆ ಸಚಿವಾಲಯಕ್ಕೆ ಕರ್ನಾಟಕ ಸರ್ಕಾರ ‍ಪ್ರಸ್ತಾವನೆ ಸಲ್ಲಿಸಿದೆ.

ಮಹದಾಯಿ ನದಿ ನೀರು ವಿವಾದ ನ್ಯಾಯಾಧೀಕರಣವು 2018ರ ಆಗಸ್ಟ್‌ 14ರಂದು ಕಳಸಾ– ಬಂಡೂರಿ ಯೋಜನೆಗೆ 3.90 ಟಿಎಂಸಿ ಅಡಿ ನೀರಿನ ಹಂಚಿಕೆ ಮಾಡಿದೆ. ಇದರಲ್ಲಿ ಬಂಡೂರಿ ನಾಲಾ ತಿರುವು ಯೋಜನೆಗೆ 2.18 ಟಿಎಂಸಿ ಅಡಿ ಮೀಸಲಿಡಲಾಗಿದೆ. ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ 10 ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್‌ವೆಲ್‌ ನಿರ್ಮಾಣ, ಪಂಪ್‌ ಹೌಸ್‌, ಎಲೆಕ್ಟ್ರಿಕಲ್‌ ಸಬ್‌ ಸ್ಟೇಷನ್‌, ಪೈಪ್‌ಲೈನ್‌ಗೆ) ಒಪ್ಪಿಗೆ ನೀಡುವಂತೆ ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ.

40 ಹೆಕ್ಟೇರ್‌ಗಿಂತ ಕಡಿಮೆ ಅರಣ್ಯ ಭೂಮಿ ಸ್ವಾಧೀನಕ್ಕೆ ಕೇಂದ್ರ ಪರಿಸರ ಸಚಿವಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯಿಂದ ಅನುಮತಿ ಪಡೆದರೆ ಸಾಕು. ಹೀಗಾಗಿ, ಕಳಸಾ ಹಾಗೂ ಬಂಡೂರಿ ಯೋಜನೆಗೆ ಪ್ರತ್ಯೇಕವಾಗಿ ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ ಎಂದು ಕರ್ನಾಟಕ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಬಂಡೂರಿ ಯೋಜನೆಗೆ ₹746 ಕೋಟಿ ವೆಚ್ಚ ಮಾಡಲಾಗುತ್ತಿದೆ. 12.17 ಹೆಕ್ಟೇರ್ ಅರಣ್ಯೇತರ ಭೂಮಿ ಬಳಕೆ ಮಾಡಲಾಗುತ್ತದೆ. ಯೋಜನೆಗಾಗಿ 15 ಹೆಕ್ಟೇರ್ ಅರಣ್ಯ ಮುಳುಗಡೆಯಾಗಲಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ‘ಈ ಯೋಜನೆಗೆ ಸಂರಕ್ಷಣಾ ಕಾಯ್ದೆ 1986ರಡಿ ಪರಿಸರ ಅನುಮೋದನೆ ಪಡೆಯುವ ಅಗತ್ಯ ಇಲ್ಲ. ಈ ಯೋಜನೆಯು ಸಂರಕ್ಷಿತ ಪ್ರದೇಶ ಹಾಗೂ ವನ್ಯಜೀವಿ ಧಾಮದೊಳಗೆ ಅನುಷ್ಠಾನ ಆಗುತ್ತಿಲ್ಲ. ಹೀಗಾಗಿ, ವನ್ಯಜೀವಿ ಅನುಮೋದನೆಯೂ ಬೇಕಿಲ್ಲ’ ಎಂದು ಕರ್ನಾಟಕ ಸರ್ಕಾರ ಪ್ರತಿಪಾದಿಸಿದೆ. ಕಳಸಾ ನಾಲಾ ತಿರುವು ಯೋಜನೆಗೆ 33 ಹೆಕ್ಟೇರ್ ಅರಣ್ಯ ಬಳಕೆಗೆ ಕರ್ನಾಟಕ ಸರ್ಕಾರ ಡಿಸೆಂಬರ್‌ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಈ ಯೋಜನೆ ಬಗ್ಗೆ ಇನ್ನಷ್ಟು ಸ್ಪಷ್ಟನೆ ನೀಡುವಂತೆ ಸಚಿವಾಲಯದ ಪ್ರಾದೇಶಿಕ ಉನ್ನತಾಧಿಕಾರಿ ಸಮಿತಿ (ಆರ್‌ಇಸಿ) ಜನವರಿಯಲ್ಲಿ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.