ADVERTISEMENT

23ರಿಂದ ಶ್ರೀರಾಮುಲು ಸಂಕಲ್ಪ ಯಾತ್ರೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 19:30 IST
Last Updated 18 ಆಗಸ್ಟ್ 2012, 19:30 IST
23ರಿಂದ ಶ್ರೀರಾಮುಲು ಸಂಕಲ್ಪ ಯಾತ್ರೆ
23ರಿಂದ ಶ್ರೀರಾಮುಲು ಸಂಕಲ್ಪ ಯಾತ್ರೆ   

ಬೆಂಗಳೂರು: ಇದೇ 23ರಿಂದ ಸೆಪ್ಟೆಂಬರ್ 18ರವರೆಗೆ ಬೆಳಗಾವಿ, ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 34 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಕಲ್ಪ ಯಾತ್ರೆ ನಡೆಸಲು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು ನಿರ್ಧರಿಸಿದ್ದಾರೆ. ಕಾರವಾರದಿಂದ ರಾಮನಗರವರೆಗೆ ನಡೆಸಿದ ಸಂಕಲ್ಪ ಯಾತ್ರೆಯ ಮಾದರಿಯಲ್ಲೇ ಎರಡನೇ ಯಾತ್ರೆಯೂ ನಡೆಯಲಿದೆ.

ಪಕ್ಷದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, `ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ 23ಕ್ಕೆ ಸಂಕಲ್ಪ ಯಾತ್ರೆ ಆರಂಭವಾಗಲಿದೆ. ಆ.30ರವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಯಾತ್ರೆ ಮುಂದುವರಿಯಲಿದೆ. ಸೆಪ್ಟೆಂಬರ್ 3ರಿಂದ 9ರವರೆಗೆ ವಿಜಾಪುರ ಮತ್ತು ಸೆ. 12ರಿಂದ 18ರವರೆಗೆ ಬಾಗಲಕೋಟೆಯಲ್ಲಿ ಯಾತ್ರೆ ಕೈಗೊಳ್ಳಲಾಗುವುದು~ ಎಂದರು.

ಪ್ರತಿದಿನ ಎರಡರಿಂದ ಮೂರು ಬಹಿರಂಗ ಸಭೆಗಳನ್ನು ನಡೆಸಲಾಗುವುದು. ಪಕ್ಷದ ಪದಾಧಿಕಾರಿಗಳ ನೇಮಕ, ಪಕ್ಷಕ್ಕೆ ಕಾರ್ಯಕರ್ತ ರನ್ನು ಬರ ಮಾಡಿಕೊಳ್ಳುವುದು, ಜನರ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ  ಯಾತ್ರೆ ಕೈಗೊಳ್ಳಲಾಗುತ್ತಿದೆ.

ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ತಾವು ಆರಂಭಿಸಿರುವ ಹೋರಾಟ ಮುಂದುವರಿಯಲಿದೆ. ತುಂಗಭದ್ರಾ ಅಣೆಕಟ್ಟೆಯ ಹೂಳು ತೆಗೆಯುವಂತೆ ಒತ್ತಾಯಿಸಿ ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಪೂರ್ಣವಾಗಿ ಹೂಳು ತೆಗೆಯುವವರೆಗೂ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

`ಈಗ ಜನರ ನೆನಪಾಯಿತೇ?~: ಯಡಿಯೂರಪ್ಪ ಅವರು ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮುಲು, `ಬಿಜೆಪಿ ಸರ್ಕಾರವೇ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಆದರೂ, ಸರ್ಕಾರದ ಮೇಲೆ ಪ್ರಭಾವ ಬೀರುವ ಶಕ್ತಿ ಹೊಂದಿದ್ದಾರೆ. ಬರ ಸ್ಥಿತಿ ತಲೆದೋರಿ ಒಂಬತ್ತು ತಿಂಗಳ ಬಳಿಕ ಯಡಿಯೂರಪ್ಪ ಅವರಿಗೆ ಜನರ ನೆನಪಾಯಿತೇ~ ಎಂದು ಪ್ರಶ್ನಿಸಿದರು.

ಬರಪೀಡಿತ ಪ್ರದೇಶಗಳಲ್ಲಿ ಮೇವಿನ ಕೊರತೆಯಿಂದ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸಲಾಗಿದೆ. ಈಗ ಅಲ್ಲಿ ಕುಡಿಯುವ ನೀರಿನ ಕೊರತೆ ತೀವ್ರವಾಗುತ್ತಿದೆ. ಯಡಿಯೂರಪ್ಪ ಅವರು ಭೇಟಿ ನೀಡುವಾಗ ಅಲ್ಲಿ ಜನರೂ ಇಲ್ಲದಿರಬಹುದು ಎಂದು ವ್ಯಂಗ್ಯವಾಡಿದರು.

`ಎಸಿಬಿ ನೋಟಿಸ್ ಬಂದಿದೆ~
ಬೆಂಗಳೂರು:
ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಪಡೆಯಲು ನ್ಯಾಯಾಧೀಶರಿಗೆ ಲಂಚ ನೀಡಿದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರನಾಗಿ ಹೇಳಿಕೆ ನೀಡಲು ಹಾಜರಾಗುವಂತೆ ಆಂಧ್ರಪ್ರದೇಶ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತಮಗೆ ನೋಟಿಸ್ ನೀಡಿದೆ ಎಂದು ಶಾಸಕ ಬಿ.ಶ್ರೀರಾಮುಲು ಖಚಿತಪಡಿಸಿದರು.

ಈ ಕುರಿತು ಪ್ರಶ್ನಿಸಿದಾಗ `ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 160ರ ಅಡಿಯಲ್ಲಿ ನನಗೆ ಎಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಮೂರು ದಿನಗಳ ಒಳಗಾಗಿ ತನಿಖಾ ತಂಡದ ಎದುರು ಹಾಜರಾಗಿ ಸಾಕ್ಷ್ಯ ಹೇಳುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಮಂಗಳವಾರ ಅಥವಾ ಬುಧವಾರ ಹೈದರಾಬಾದ್‌ಗೆ ತೆರಳಿ ಎಸಿಬಿ ಎದುರು ಹಾಜರಾಗುವೆ~ ಎಂದು ಉತ್ತರಿಸಿದರು.

`ಈ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಸುರೇಶ್‌ಬಾಬು ನನಗೆ ಸಂಬಂಧಿಸಿದಂತೆ ಏನು ಹೇಳಿಕೆ ನೀಡಿದ್ದಾರೆ ಎಂಬ ಪೂರ್ಣ ಮಾಹಿತಿ ನನಗೆ ತಿಳಿದಿಲ್ಲ. ಭಾರತದಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಸಿಬಿ ನೋಟಿಸ್ ನೀಡಿದೆ. ತನಿಖಾ ತಂಡದ ಎದುರು ಹಾಜರಾಗಿ ಅವರ ಪ್ರಶ್ನೆಗಳಿಗೆ ಉತ್ತರ ನೀಡುವುದು ನನ್ನ ಧರ್ಮ. ಅದರಂತೆ ನಡೆದುಕೊಳ್ಳುತ್ತೇನೆ~ ಎಂದರು.

`ಮೊದಲಿನಿಂದಲೂ ಜನರ ಮಧ್ಯೆ ಇರುವವನು ನಾನು. ನನಗೆ ಬಂಧನದ ಭೀತಿ ಇಲ್ಲ. ಹೆದರಿ ಓಡಿ ಹೋಗುವ ವ್ಯಕ್ತಿಯೂ ನಾನಲ್ಲ~ ಎಂದು ಉತ್ತರಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.