ADVERTISEMENT

25 ಕೆರೆಗಳ ಹೂಳು ತೆಗೆಯಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 18:10 IST
Last Updated 6 ಮಾರ್ಚ್ 2011, 18:10 IST

ಶಿವಮೊಗ್ಗ: ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಕೋಟಿ ರೂ ವೆಚ್ಚದಲ್ಲಿ 20 ರಿಂದ 25 ಕೆರೆಗಳ ಹೂಳು ತೆಗೆಯಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ಇಲ್ಲಿ ತಿಳಿಸಿದರು.

 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆಗಳ ಹೂಳೆತ್ತುವ ಕಾಮಗಾರಿ ತುರ್ತಾಗಿ ಆಗಬೇಕಾಗಿದ್ದರಿಂದ ಮಳೆಗಾಲ ಆರಂಭವಾಗುವ ಒಳಗೆ ಮುಗಿಸಬೇಕು. ಈ ಕಾಮಗಾರಿಯ ಸಂಪೂರ್ಣ ಉಸ್ತುವಾರಿಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದರು.

 ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಸರ್ಕಾರವೇ ಕಾರಣ. ಕೇಂದ್ರ ಸರ್ಕಾರ ತಕ್ಷಣ ರೇಷ್ಮೆ ಆಮದು ನಿಲ್ಲಿಸಬೇಕು ಎಂದು ಆಗ್ರಹಿಸಿದ ಯಡಿಯೂರಪ್ಪ, ಹೈದರಾಬಾದ್- ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಲಂ 371 ತಿದ್ದುಪಡಿಗೆ ಒತ್ತಾಯಿಸುವುದರ ಜತೆಗೆ ಅಡಿಕೆಯೂ ಸೇರಿದಂತೆ ರೇಷ್ಮೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರಕ್ಕೆ ಮನವರಿಕೆ ಮಾಡಲು ನವದೆಹಲಿಗೆ ಸರ್ವ ಪಕ್ಷದ ನಿಯೋಗ ತೆರಳುವುದಾಗಿ ತಿಳಿಸಿದರು.

ಒಟ್ಟಾರೆ 10 ಲಕ್ಷ ಸಣ್ಣ, ಅತಿ ಸಣ್ಣ ರೈತರಿಗೆ ನೇರ ಹಣ ನೀಡುವ ಯೋಜನೆಯನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಶೀಘ್ರ ಚಾಲನೆಗೆ ತರಲಾಗುವುದು. ಇದರಲ್ಲಿ 2 ಲಕ್ಷ ಪರಿಶಿಷ್ಟ ಜಾತಿ, ಪಂಗಡದ ರೈತರನ್ನು ಆಯ್ಕೆ ಮಾಡಲಾಗುವುದು. ಇದು ಏಪ್ರಿಲ್ 1ರೊಳಗೆ ಮುಗಿಯಬೇಕೆದು  ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.