ADVERTISEMENT

25 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ

ಕೆ.ಎಂ.ಸಂತೋಷಕುಮಾರ್
Published 5 ಡಿಸೆಂಬರ್ 2017, 19:30 IST
Last Updated 5 ಡಿಸೆಂಬರ್ 2017, 19:30 IST
25 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ
25 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ   

ಬೆಂಗಳೂರು: ಮಧ್ಯಾಹ್ನ ಬಿಸಿಯೂಟ ಯೋಜನೆಯಲ್ಲಿ ಕ್ರಾಂತಿ ಮಾಡಿರುವ ಇಸ್ಕಾನ್‌ ‘ಅಕ್ಷಯ ಪಾತ್ರ’ ಪ್ರತಿಷ್ಠಾನವು ಪ್ರತಿ ರಾಜ್ಯದಲ್ಲೂ ಉಚಿತ ಶಿಕ್ಷಣ ನೀಡಲು ಸಿದ್ಧತೆ ನಡೆಸಿದ್ದು, ಶಿಕ್ಷಣ ವ್ಯವಸ್ಥೆಗೆ ಹೊಸ ರೂಪ ಕೊಡಲು ಮುಂದಾಗಿದೆ.

‘ಮಹಾನ್‌ ಭಾರತದ ಪ್ರತಿಭಾ ಶಾಲೆ ಹೆಸರಿನಲ್ಲಿ ಆಧುನಿಕ ಗುರುಕುಲಗಳಿಗೆ ಅಕ್ಷಯ ಪಾತ್ರ ಬುನಾದಿ ಹಾಕುತ್ತಿದೆ. ಪರಂಪರೆ, ಸಂಸ್ಕೃತಿ ಮತ್ತು ಅಧ್ಯಾತ್ಮ ಮೌಲ್ಯಗಳನ್ನು ಶಿಕ್ಷಣದ ಮೂಲಕ ಮುಂದಿನ ಪೀಳಿಗೆಯಲ್ಲಿ ಬಿತ್ತಿ ಬೆಳೆಸುವುದು ಈ ಯೋಜನೆಯ ಉದ್ದೇಶ. ಆಧುನಿಕ ಗುರುಕುಲಗಳನ್ನು ಮುಂದಿನ ವರ್ಷ ದೇಶದಾದ್ಯಂತ ತೆರೆಯಲಾಗುತ್ತಿದೆ’ ಎಂದು ಇಸ್ಕಾನ್‌ ಮತ್ತು ಅಕ್ಷಯ ಪಾತ್ರ ಪ್ರತಿಷ್ಠಾನದ ಮಾಧ್ಯಮ ವಿಭಾಗದ ಮುಖ್ಯಸ್ಥ ಕುಲಶೇಖರ ಚೈತನ್ಯದಾಸ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದ ನಾಲ್ಕು ಭಾಗಗಳಲ್ಲಿ ತಲೆ ಎತ್ತಲಿರುವ ಆಧುನಿಕ ಗುರುಕುಲಗಳಲ್ಲಿ (ವಸತಿ ಶಿಕ್ಷಣ ಶಾಲೆ) 1ನೇ ತರಗತಿಯಿಂದ 10ನೇ ತರಗತಿವರೆಗೆ 8,000 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ ಎನ್ನುತ್ತಾರೆ ಅವರು.

ADVERTISEMENT

‘ಮಂಗಳೂರು, ಹುಬ್ಬಳ್ಳಿ, ಬಳ್ಳಾರಿ ಭಾಗದಲ್ಲಿ ಗುರುಕುಲಗಳು ಆರಂಭವಾಗಲಿವೆ. ಒಂದೊಂದು ಗುರುಕುಲದಲ್ಲಿ ತಲಾ 2,000 ಮಕ್ಕಳಿಗೆ ಉಚಿತ ವಸತಿ, ಊಟ, ಶಿಕ್ಷಣ ದೊರೆಯಲಿದೆ. ಶ್ರೀರಂಗಪಟ್ಟಣದ ಬನ್ನೂರು ರಸ್ತೆಯ ಮಹದೇವಪುರದಲ್ಲಿ ಗುರುಕುಲ ಆರಂಭಕ್ಕೆ 19 ಎಕರೆ ಗುರುತಿಸಲಾಗಿದೆ. ಒಂದೂವರೆ ವರ್ಷದಲ್ಲಿ ಅಲ್ಲಿ ವಸತಿ ಶಾಲೆ ಆರಂಭವಾಗಲಿದೆ’ ಎಂದರು.

25,000 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ: ದೇಶದಾದ್ಯಂತ ಸುಮಾರು 25,000 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಪ್ರತಿಷ್ಠಾನ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪರೀಕ್ಷೆ ನಡೆಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುಕುಲಕ್ಕೆ ದಾಖಲಿಸಿಕೊಳ್ಳಲಾಗುತ್ತದೆ. ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿ, ವೈದ್ಯಕೀಯ, ಎಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳವರೆಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಮಕ್ಕಳ ಕಲಿಕೆಯ ಹಂಬಲ ಗುರುತಿಸಿ, ಅವರು ಭವಿಷ್ಯದಲ್ಲಿ ಏನಾಗಬೇಕೆಂದು ಬಯಸುತ್ತಾರೋ ಅದರಂತೆ, ಅವರ ಕನಸುಗಳನ್ನು ಈಡೇರಿಸಲು ಪ್ರತಿಷ್ಠಾನ ಸಂಕಲ್ಪ ಮಾಡಿದೆ. ಪ್ರತಿಷ್ಠಾನದ ಮನವಿ ಮೇರೆಗೆ ಗುರುಕುಲ ವಿಶ್ವವಿದ್ಯಾಲಯ ಆರಂಭಿಸಲು ಆಂಧ್ರಪ್ರದೇಶ ಸರ್ಕಾರವು ಅನಂತಪುರ ಜಿಲ್ಲೆಯ ಪೆನುಕೊಂಡದಲ್ಲಿ 200 ಎಕರೆ ಮಂಜೂರು ಮಾಡಿದೆ. ಕಳಿಂಗ ವಿಶ್ವವಿದ್ಯಾಲಯದ ಪ್ರೇರಣೆಯಿಂದ ಈ ವಿಶ್ವವಿದ್ಯಾಲಯಕ್ಕೆ ಬುನಾದಿ ಹಾಕಲಾಗುತ್ತಿದೆ ಎನ್ನುತ್ತಾರೆ ಕುಲಶೇಖರ ಚೈತನ್ಯದಾಸ.

ಉಚಿತ ಶಿಕ್ಷಣ ನೀಡುವ ಗುರುಕುಲ

‘ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ಮಕ್ಕಳ ಮೇಲೆ ಹೆಚ್ಚುತ್ತಿರುವ ಒತ್ತಡದಿಂದ ಪಾರು ಮಾಡಲು, ಒತ್ತಡ ಮತ್ತು ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಲು ಆಧುನಿಕ ಗುರುಕುಲಗಳ ಅವಶ್ಯಕತೆ ಇದೆ’ ಎನ್ನುತ್ತಾರೆ ಅಕ್ಷಯಪಾತ್ರ ಪ್ರತಿಷ್ಠಾನದ ಅಧ್ಯಕ್ಷ ಮಧುಪಂಡಿತ ದಾಸ.

‘ಪ್ರತಿ ವಿದ್ಯಾರ್ಥಿಗೂ ಕಡ್ಡಾಯ ಶಿಕ್ಷಣ ಮತ್ತು ಪೌಷ್ಟಿಕ ಆಹಾರ ನೀಡುವುದು ಸರ್ಕಾರದ ಉದ್ದೇಶವೂ ಆಗಿದೆ. ಈಗಾಗಲೇ ಅಕ್ಷಯ ಪಾತ್ರ ಪ್ರತಿಷ್ಠಾನ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಪೂರೈಸುವ ಮೂಲಕ ಸರ್ಕಾರದ ಆಶಯ ಸಾಕಾರಗೊಳಿಸುತ್ತಿದೆ. ಪ್ರತಿ ವಿದ್ಯಾರ್ಥಿಗೂ ಉಚಿತ ಶಿಕ್ಷಣ ನೀಡುವ ಗುರುಕುಲಗಳನ್ನು ಎಲ್ಲ ರಾಜ್ಯಗಳಲ್ಲೂ ಸರ್ಕಾರಗಳ ನೆರವಿನೊಂದಿಗೆ ಆರಂಭಿಸುತ್ತೇವೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.