ADVERTISEMENT

26ರಂದು ಸರ್ಕಾರದ ವಿರುದ್ಧ ಕೆಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ಬೆಂಗಳೂರು: `ಕುಂಭಕರ್ಣನಂತೆ ನಿದ್ರಾವಸ್ಥೆಯಲ್ಲಿರುವ ರಾಜ್ಯದ ಬಿಜೆಪಿ ಸರ್ಕಾರವನ್ನು ಬಡಿದೆಬ್ಬಿಸಲು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಿಂದ ವಿಧಾನ ಸೌಧಕ್ಕೆ ಇದೇ 26ರಂದು ಪ್ರತಿಭಟನಾ ರ‌್ಯಾಲಿ ನಡೆಸಲಾಗುವುದು. ನಾನೇ ಇದರ ನೇತೃತ್ವ ವಹಿಸುವೆ' ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

`ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರಂಭಿಸಿದ ವಿವಿಧ ಯೋಜನೆಗಳ ಫಲ ಅರ್ಹರಿಗೆ ಇತ್ತೀಚಿನ ದಿನಗಳಲ್ಲಿ ದೊರೆಯುತ್ತಿಲ್ಲ. ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ, ಸುವರ್ಣ ಭೂಮಿ ಮತ್ತಿತರ ಯೋಜನೆಗಳ ಅಡಿ ಅರ್ಹರಿಗೆ ನೀಡಬೇಕಿರುವ ಹಣವನ್ನು ವಾರದೊಳಗೆ ಕೊಡಬೇಕು. ಇಲ್ಲವಾದರೆ, ಜನವರಿ ಮೊದಲ ವಾರದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಲಾಗುವುದು' ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಇಲ್ಲದ ಸ್ಥಿತಿ ರಾಜ್ಯದಲ್ಲಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ರಾಜ್ಯ ಪ್ರವಾಸಕ್ಕೆ ಸಮಯವೇ ಇಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಯವರು (ಎಸ್.ವಿ. ರಂಗನಾಥ್) ತಮ್ಮ ಕರ್ತವ್ಯ ಮರೆತಿದ್ದಾರೆ. 60 ಸಾವಿರ ಅರ್ಹರಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಬಾಕಿ ಇದೆ' ಎಂದು ಹೇಳಿದರು.

ಗುಜರಾತ್ ಫಲಿತಾಂಶ: ಗುಜರಾತ್‌ನಲ್ಲಿ ಬಿಜೆಪಿ ಗೆಲುವು ಕುರಿತು, `ಅಲ್ಲಿನ ಬಿಜೆಪಿ, ಪ್ರಾದೇಶಿಕ ಪಕ್ಷದ ರೀತಿಕಾರ್ಯನಿರ್ವಹಿಸುತ್ತಿದೆ. ಮೋದಿ ಅವರು ಅಲ್ಲಿ ಚುನಾವಣಾ ಪ್ರಚಾರಕ್ಕೆ ಕೇಂದ್ರದ ಬಿಜೆಪಿ ನಾಯಕರಿಗೆ ಬರಲು ಅವಕಾಶ ನೀಡಲಿಲ್ಲ. ಬಿಟ್ಟಿದ್ದರೆ 10-15 ಸ್ಥಾನಗಳು ಕಡಿಮೆ ಬರುತ್ತಿದ್ದವು' ಎಂದು ಲೇವಡಿ ಮಾಡಿದರು.

ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

ಕೆಜೆಪಿಯ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ವಿ.ಧನಂಜಯ ಕುಮಾರ್ ಅವರನ್ನು ರಾಜ್ಯ ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದ್ದು, ಪಕ್ಷಕ್ಕೆ 19 ಜನ ಉಪಾಧ್ಯಕ್ಷರನ್ನು ನೇಮಕ ಮಾಡಲಾಗಿದೆ.

ಉಪಾಧ್ಯಕ್ಷರ ಹೆಸರು: ವಿಧಾನಸಭೆಯ ಮಾಜಿ ಅಧ್ಯಕ್ಷ ಬಿ.ಜಿ. ಬಣಕಾರ (ಹಿರೇಕೆರೂರು), ಮಾಜಿ ಸಚಿವರಾದ ಕೆ.ಎಚ್. ಶ್ರೀನಿವಾಸ್ (ಶಿವಮೊಗ್ಗ), ಜಬ್ಬಾರ್ ಖಾನ್ ಹೊನ್ನಳ್ಳಿ (ಧಾರವಾಡ), ಗುರುಪಾದಪ್ಪ ನಾಗಮಾರಪಳ್ಳಿ (ಬೀದರ), ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ (ರಾಯಚೂರು), ಮಾಜಿ ಸಂಸದ ವಿಜಯ ಸಂಕೇಶ್ವರ (ಹುಬ್ಬಳ್ಳಿ), ಮಾಜಿ ಶಾಸಕರಾದ ಸುಭಾಸ ಕಲ್ಲೂರು (ಬೀದರ್), ಮೈಕೆಲ್ ಫರ್ನಾಂಡಿಸ್ (ತುಮಕೂರು), ಅಶೋಕ ಕಾಟವೆ (ಹುಬ್ಬಳ್ಳಿ), ಎಚ್.ಎಂ. ವಿಶ್ವನಾಥ್ (ಹಾಸನ), ನಿವೃತ್ತ ಐಎಎಸ್ ಅಧಿಕಾರಿ ಐ.ಆರ್. ಪೆರುಮಾಳ್, ಪ್ರಸನ್ನ ಕುಮಾರ್, ಮಧುಶ್ರೀ (ಬೆಂಗಳೂರು), ಎಂ. ನಾಗರಾಜ್ (ದಾವಣಗೆರೆ), ಮಂಜುನಾಥ ಗೌಡ, ಬಾವಿ ಬೆಟ್ಟಪ್ಪ (ಬಳ್ಳಾರಿ), ಡಾ. ತಿಮ್ಮಯ್ಯ, ಚಂದ್ರಾ ನಾಯ್ಕ (ಚಳ್ಳಕೆರೆ), ಸೈಯದ್ ಕಿಸರ್ ಪಾಷಾ (ರಾಮನಗರ).

ಪ್ರಧಾನ ಕಾರ್ಯದರ್ಶಿಗಳು:  ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ(ತುಮಕೂರು), ರಾಜೇಂದ್ರ ಗೋಖಲೆ (ಧಾರವಾಡ), ಶಂಕರಗೌಡ ಪಾಟೀಲ (ಬೆಳಗಾವಿ).

ಕಾರ್ಯದರ್ಶಿಗಳು: ಜಗದೀಶ ಹಿರೇಮಮನಿ (ಬಾಗಲಕೋಟೆ), ಡಿ.ಕೆ. ಸಯ್ಯದ್ (ಹರಿಹರ), ತಿಪ್ಪಣ್ಣ ಕಮಕನೂರು (ಗುಲ್ಬರ್ಗ), ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪುಟ್ಟಸಿದ್ಧ ಶೆಟ್ಟಿ (ಮೈಸೂರು), ಶಿವಕುಮಾರ ಚೌಡಶೆಟ್ಟಿ (ರಾಮನಗರ), ಅನಂತರಾಮ್ (ಶಿವಮೊಗ್ಗ), ಶಕುಂತಲಾ ಬೆಳದಾಳೆ (ಬೀದರ್), ಎಂ. ಜಗದೀಶ (ಚಿತ್ರದುರ್ಗ), ಮಾಜಿ ಶಾಸಕ ಗುರುದೇವ (ಹಾಸನ), ನಜೀರ್ ಅಹಮದ್, ಮದನ್ ಪಟೇಲ್, ಸೆಬಾಸ್ಟಿಯನ್ ಆಂಟನಿ, ಭಾರತಿ ಮಲ್ಲಿಕಾರ್ಜುನ (ಬೆಂಗಳೂರು), ಶಶಿಕಲಾ ಜೊಲ್ಲೆ (ಬೆಳಗಾವಿ), ರಾಮಚಂದ್ರ ಬೈಕಂಪಾಡಿ (ಮಂಗಳೂರು).

ವಿಧಾನಸಭೆಯ ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ್ ಅವರನ್ನು ಪಕ್ಷದ ಮಾಧ್ಯಮ ಪ್ರಮುಖರನ್ನಾಗಿ ಮತ್ತು ಖಜಾಂಚಿ ಆಗಿ ಎಸ್.ಎನ್. ಈಶ್ವರ್ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯ ಕಾರ್ಯಕಾರಿಣಿಗೆ 32  ಸದಸ್ಯರನ್ನು ನೇಮಕ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.