ADVERTISEMENT

ಪಠ್ಯಕ್ರಮ ಪರಿಷ್ಕರಣೆ: ಆತಂಕ ಅನಗತ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 19:17 IST
Last Updated 18 ಫೆಬ್ರುವರಿ 2019, 19:17 IST

ಬೆಂಗಳೂರು: ‘ಅರ್ಥಶಾಸ್ತ್ರ’, ‘ವ್ಯವಹಾರಿಕ ಅಧ್ಯಯನ’ ಹಾಗೂ ‘ಲೆಕ್ಕಶಾಸ್ತ್ರ’ ವಿಷಯಗಳ ಪಠ್ಯಕ್ರಮವನ್ನು ಪರಿಷ್ಕರಿಸಿ ಎನ್‌ಸಿಆರ್‌ಟಿಇ ಪಠ್ಯಕ್ರಮ ಅಳವಡಿಸಿಕೊಳ್ಳಲಾಗಿದೆ. ಅದರಿಂದಾಗಿ ಈ ಬಾರಿಯ ಪರೀಕ್ಷೆಯಲ್ಲಿ ಯಾವ ರೀತಿ ಪ್ರಶ್ನೆಗಳನ್ನು ಕೇಳಬಹುದು ಎಂಬ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿರುವುದು ಫೋನ್‌ ಕರೆಗಳಿಂದ ವ್ಯಕ್ತವಾಯಿತು.

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಭದ್ರಾವತಿಯ ತೇಜಸ್, ಸವದತ್ತಿಯ ದರ್ಶನ್, ‘ಸರ್, ಪಠ್ಯಕ್ರಮ ಬದಲಾಯಿಸಿ
ದ್ದೀರಾ. ಪ್ರಶ್ನೆಪತ್ರಿಕೆ ಹೇಗಿರುತ್ತದೆಂಬ ಆತಂಕ ಇದೆ’ ಎಂದು ಅಳಲು ತೋಡಿಕೊಂಡರು. ತಾಳ್ಮೆಯಿಂದ ವಿವರಣೆ ನೀಡಿದಜಾಫರ್, ‘ವಿಜ್ಞಾನ ವಿಷಯದ ವಿಷಯಗಳನ್ನು ಎರಡು ವರ್ಷಗಳ ಹಿಂದೆ ಪರಿಷ್ಕರಣೆ ಮಾಡಲಾಗಿದೆ. ಈ ಬಾರಿ ವಾಣಿಜ್ಯ ವಿಷಯಗಳನ್ನು ಪರಿಷ್ಕರಣೆ ಮಾಡಿದ್ದೇವೆ. ಆ ಬಗ್ಗೆ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ’ ಎಂದರು.

‘ಈಗಾಗಲೇ ಪೂರ್ವಭಾವಿ ಪರೀಕ್ಷೆ ನಡೆಸಿ ವಾಣಿಜ್ಯ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳನ್ನು ಕೊಟ್ಟಿದ್ದೇವೆ. ಅದೇ ಮಾದರಿಯಲ್ಲೇ ಪ್ರಶ್ನೆಗಳು ಇರಲಿದ್ದು, ಅದರನ್ವಯ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗಬೇಕು’ ಎಂದು ತಿಳಿಸಿದರು.

ADVERTISEMENT

ಬ್ಯಾಂಕಿಂಗ್‌ಗೂ ಸಲಹೆ

* ಸಂಜಯ್ ದಾವಣಗೆರೆ, ಎಂಬಿಎ ಓದುತ್ತಾ ಇದ್ದೇನೆ. ಮನೆಯಲ್ಲಿ ಬ್ಯಾಂಕಿಂಗ್‌ ಪರೀಕ್ಷೆ ಬರೆಯುವಂತೆ ಒತ್ತಾಯಿಸುತ್ತಿದ್ದಾರೆ. ನನ್ನ ಗಣಿತ ಜ್ಞಾನ ಅಷ್ಟಕಷ್ಟೇ. ಬ್ಯಾಂಕಿಂಗ್‌ ಪರೀಕ್ಷೆ ಎದುರಿಸಲು ತರಬೇತಿ ಪಡೆಯಬೇಕಾ?

ಜಾಫರ್: ಬೇರೆಯವರು ಹೇಳಿದರು ಎಂದು ಪರೀಕ್ಷೆ ಬರೆಯಬೇಡಿ. ಇಷ್ಟಪಟ್ಟು ಬರೆಯಿರಿ. ಯಾವ ವಿಷಯವು ಅರ್ಥ ಆಗುವುದಿಲ್ಲವೋ ಅದನ್ನು ಮತ್ತೊಮ್ಮೆ, ಮಗದೊಮ್ಮೆ ಓದಿ ತಾನೇ ಅರ್ಥವಾಗುತ್ತದೆ.

ಪರೀಕ್ಷಾ ಪ್ರವೇಶ ಪತ್ರ ಯಾವಾಗ ಕೊಡುತ್ತೀರಾ?

*ಸವಿತಾ ಧಾರವಾಡ, ಪರೀಕ್ಷೆಗೆ ಹತ್ತು ದಿನ ಬಾಕಿ ಇದೆ. ಪರೀಕ್ಷಾ ಪ್ರವೇಶ ಪತ್ರ ಇನ್ನು ಬಂದಿಲ್ಲ. ಯಾವಾಗ ಕೊಡುತ್ತೀರಾ.

ಜಾಫರ್: ಈಗಾಗಲೇ ನಿಮ್ಮ ಕಾಲೇಜಿಗೆ ಕಳುಹಿಸಿದ್ದೇವೆ. ಅವರೇ ಪ್ರಿಂಟ್ ತೆಗೆದು ನಿಮಗೆ ಕೊಡುತ್ತಾರೆ. ಕಾಲೇಜಿನವರನ್ನು ವಿಚಾರಿಸು.

ನಮ್ಮೂರಿಗೆ ‘ಸ್ಕ್ವಾಡ್’ ಬರಲ್ವಂತೆ?

* ನವೀನ್ ಅಳವಂಡಿ, ಗದಗ, ನಮಸ್ಕಾರ್ ಸಾಹೇಬ್ರೆ. ನಮ್ಮೂರಿನ ಎಕ್ಸಾಂ ಸೆಂಟರ್‌ಗೆ ಸ್ಕ್ವಾಡ್‌ ಬರೊಲ್ಲ ಅಂತಾ ಹೇಳಕತ್ತ್ಯಾರ. ನಿಜಾ ಏನ್ರೀ?

ಜಾಫರ್‌: ಸ್ಕ್ವಾಡ್ ಬರ್ತಾರ್. ಆಕಸ್ಮಾತ್ ಬರದಿದ್ರ, ನಾನೇ ಖುದ್ದು ಬರ್ತೇನ್ರೀ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಸ್ಕ್ವಾಡ್ ಬಂದೇ ಬರುತ್ತದೆ. ಈ ಬಗ್ಗೆ ಸಂಶಯ ಬೇಡ.

ಮರು ಮೌಲ್ಯಮಾಪನ ಶುಲ್ಕ ಇಳಿಕೆಗೆ ಚಿಂತನೆ

* ಬಸವರಾಜ್ ಸೇಡಂ, ನನ್ನ ಸಂಬಂಧಿ ಮಗಳದ್ದು ಎರಡು ವಿಷಯ ಹೋಗಿದೆ. ಮೌಲ್ಯ ಮಾಪನ ಸರಿಯಾಗಿಲ್ಲ ಎಂದು ಆಕೆ ಹೇಳುತ್ತಿದ್ದಾಳೆ. ಮರು ಮೌಲ್ಯಮಾಪನ ಹಾಗೂ ಫೋಟೊ ಕಾಪಿ ಶುಲ್ಕವನ್ನಾದರೂ ಕಡಿಮೆ ಮಾಡಿ.

ಜಾಫರ್: ಶುಲ್ಕ ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು.

**
ಈ ಬಾರಿ ಫಲಿತಾಂಶ ಬೇಗ

ಉತ್ತರ ಪತ್ರಿಕೆಯ ಮೌಲ್ಯಮಾಪನದ ನಂತರದ ಪ್ರಕ್ರಿಯೆಗಳೆಲ್ಲವೂ ಆನ್‌ಲೈನ್‌ ಮೂಲಕ ನಡೆಯಲಿದ್ದು, ಈ ವರ್ಷ ಪರೀಕ್ಷಾ ಫಲಿತಾಂಶವನ್ನು ಬಹುಬೇಗ ಪ್ರಕಟಿಸಲಾಗುವುದು. ‘ಪರೀಕ್ಷಾ ಪ್ರಕ್ರಿಯೆಗೆಂದು ‘ಪ್ರಗತಿ – 10 ಮತ್ತು 12’ ಆನ್‌ಲೈನ್ ವ್ಯವಸ್ಥೆ ರೂಪಿಸಲಾಗಿದೆ. ಮೌಲ್ಯಮಾಪನದ ನಂತರ ಉತ್ತರ ಪತ್ರಿಕೆಯ ಮುಖಪುಟವನ್ನು ಸ್ಕ್ಯಾನಿಂಗ್ ಮಾಡಿ ಆನ್‌ಲೈನ್‌ನಲ್ಲಿ ದಾಖಲೀಕರಣ ಮಾಡಲಾಗುವುದು. ಆ ಮಾಹಿತಿ ನೇರವಾಗಿ ಪರೀಕ್ಷಾ ಫಲಿತಾಂಶದ ಸರ್ವರ್‌ನಲ್ಲಿ ಸಂಗ್ರಹವಾಗಲಿದ್ದು, ಮಧ್ಯದಲ್ಲಿ ಯಾರೊಬ್ಬರು ಮಾಹಿತಿ ಬದಲಾಯಿಸಲು ಸಾಧ್ಯವಿಲ್ಲ’ ಎಂದು ಜಾಫರ್ ಹೇಳಿದರು.

**
‘ಬ್ಲೂ ಪ್ರಿಂಟ್’ ಅಪ್‌ಲೋಡ್‌ ಮಾಡಲ್ವಾ ಸರ್?

‘ಪರೀಕ್ಷೆಯ ‘ಬ್ಲೂ ಪ್ರಿಂಟ್ (ನೀಲಿನಕ್ಷೆ)’ ಅನ್ನು ಯಾವಾಗ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುತ್ತೀರಾ’ ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಜಾಫರ್, ‘ಅಂಥ ಯಾವುದೇ ಬ್ಲೂ ಪ್ರಿಂಟ್ ಅಪ್‌ಲೋಡ್ ಮಾಡುವುದಿಲ್ಲ. ಈಗಾಗಲೇ ಪೂರ್ವಭಾವಿ ಪರೀಕ್ಷೆ ನಡೆಸಲಾಗಿದೆ. ಅದರ ಪ್ರಶ್ನೆಪತ್ರಿಕೆಯೇ ಮಾದರಿ ಪ್ರಶ್ನೆಪತ್ರಿಕೆ. ಅದನ್ನು ನೋಡಿಕೊಂಡರೆ ಸಾಕು’ ಎಂದು ಸಲಹೆ ನೀಡಿದರು.

‘ಈ ಹಿಂದೆ ಪ್ರಶ್ನೆಗಳನ್ನು ಆಯ್ಕೆ ಮಾಡಲು ಬ್ಲೂ ಪ್ರಿಂಟ್ ವ್ಯವಸ್ಥೆ ಇತ್ತು. ಅದು ಶಿಕ್ಷಕರಿಗಷ್ಟೇ ಮೀಸಲಿರುತ್ತಿತ್ತು. ಹಾಗಿದ್ದರೂ ಅದನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗುತ್ತಿತ್ತು. ನಾನು ಬಂದ ಮೇಲೆ ನಿಲ್ಲಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.