ADVERTISEMENT

ಹಣದ ಅಕ್ರಮ ವರ್ಗಾವಣೆ ಕೆಎಸ್‌ಎಫ್‌ಐಸಿ ಅಧಿಕಾರಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 16:34 IST
Last Updated 19 ಅಕ್ಟೋಬರ್ 2022, 16:34 IST
   

ಬೆಂಗಳೂರು: ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಹಾಸನ ಜಿಲ್ಲಾ ಘಟಕದ ಸಹಾಯಕ ವ್ಯವಸ್ಥಾಪಕರಾಗಿದ್ದ ಬಿ.ಸಿ. ಶಾಂತಕುಮಾರ್‌ ಹಣದ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿರುವುದು ಸಾಬೀತಾಗಿದ್ದು, ಅವರಿಗೆ ಅಪರಾಧಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಮೂರು ವರ್ಷಗಳ ಕಠಿಣ ಸಜೆ ವಿಧಿಸಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಶಾಂತಕುಮಾರ್‌ ವಿರುದ್ಧ ಲೋಕಾಯುಕ್ತ ಪೊಲೀಸರು 2009ರ ಡಿಸೆಂಬರ್‌ 1ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಅವರ ಮನೆ ಹಾಗೂ ಇತರ ಸ್ಥಳಗಳ ಮೇಲೆ ದಾಳಿಮಾಡಿ ಶೋಧ ನಡೆಸಿದ್ದರು. ₹ 84.42 ಲಕ್ಷ ಮೊತ್ತದ ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿತ್ತು. ಅವರು ಆದಾಯಕ್ಕಿಂತ ಶೇಕಡ 122.79ರಷ್ಟು ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ತನಿಖಾ ತಂಡ ವರದಿ ನೀಡಿತ್ತು.

ಲೋಕಾಯುಕ್ತ ಪೊಲೀಸರ ವರದಿ ಆಧರಿಸಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ 2010ರ ಮಾರ್ಚ್‌ 31ರಂದು ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು. ಶಾಂತಕುಮಾರ್‌ ಹಣದ ಅಕ್ರಮ ವರ್ಗಾವಣೆ ಮತ್ತು ಅಕ್ರಮ ಆಸ್ತಿ ಸಂಪಾದನೆಯಲ್ಲಿ ತೊಡಗಿರುವುದನ್ನು ದೃಢಪಡಿಸಿ ಇ.ಡಿ ವರದಿ ನೀಡಿತ್ತು. ಅವರಿಗೆ ಸೇರಿದ ₹ 60.41 ಲಕ್ಷ ಮೌಲ್ಯದ ಆಸ್ತಿಗಳನ್ನು 2014ರಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ADVERTISEMENT

‘2015ರ ಮಾರ್ಚ್‌ 27ರಂದು ಇ.ಡಿ ಅಧಿಕಾರಿಗಳು ಶಾಂತಕುಮಾರ್‌ ವಿರುದ್ಧ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಳಿಸಿರುವ ವಿಶೇಷ ನ್ಯಾಯಾಲಯ, ‘ಶಾಂತಕುಮಾರ್‌ ಅಪರಾಧಿ’ ಎಂದು ಸಾರಿದೆ. ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನೂ ವಿಧಿಸಿ ಆದೇಶ ಹೊರಡಿಸಿದೆ’ ಎಂದು ಜಾರಿ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.