ADVERTISEMENT

ಮಕ್ಕಳ ಆಸರೆ ಕಸಿದ ಕೊರೊನಾ: 32 ಮಕ್ಕಳಿಗೆ ಪರರ ಆಶ್ರಯ ಅನಿವಾರ್ಯ

ಚಿಂತಾಮಣಿ, ಗೌರಿಬಿದನೂರಿನ ಮೂರು ಮಕ್ಕಳು ಅನಾಥ

ಡಿ.ಎಂ.ಕುರ್ಕೆ ಪ್ರಶಾಂತ
Published 14 ಜೂನ್ 2021, 1:32 IST
Last Updated 14 ಜೂನ್ 2021, 1:32 IST
   

ಚಿಕ್ಕಬಳ್ಳಾಪುರ: ಕೋವಿಡ್‌ ಸೋಂಕಿನಿಂದ ಜಿಲ್ಲೆಯಲ್ಲಿ 32 ಮಕ್ಕಳು ಪರರ ಆಶ್ರಯಕ್ಕೆ ಎದುರು ನೋಡುವಂತಾಗಿದೆ. ಇವರಲ್ಲಿ ಮೂರು ಮಕ್ಕಳು ತಂದೆ, ತಾಯಿಯನ್ನು ಕಳೆದುಕೊಂಡು ಅನಾಥರಾದರೆ, 29 ಮಕ್ಕಳು ತಮ್ಮ ಭವಿಷ್ಯ ರೂಪಿಸುವ ‘ಆಧಾರ’ ಎನ್ನುವಂತಿದ್ದ ತಂದೆಯನ್ನೇ ಕಳೆದುಕೊಂಡಿದ್ದಾರೆ.

ತಮ್ಮ ಮನೆಗಳಲ್ಲಿ ದುಡಿಯುವವರನ್ನು ಕಳೆದುಕೊಂಡಿರುವ ಈ ಮಕ್ಕಳು ವಸತಿ, ಶಿಕ್ಷಣ, ಸುರಕ್ಷೆಗಾಗಿ ಮತ್ತೊಬ್ಬರನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 140 ಮಕ್ಕಳು ಕೋವಿಡ್‌ ಸೋಂಕಿನಿಂದ ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ. ‌‌ಕೆಲವು ಮಕ್ಕಳ ಪೋಷಕರು ಸರ್ಕಾರಿ ನೌಕರಿಯಲ್ಲಿಯೂ ಇದ್ದರು. ಇವರಲ್ಲಿ 29 ಮಕ್ಕಳ ಮನೆಗಳಲ್ಲಿ ದುಡಿಮೆಗೆ ಆಧಾರವಾಗಿದ್ದವರೇ ಅಸುನೀಗಿದ್ದಾರೆ. ಈ ಕುಟುಂಬಗಳು ಆರ್ಥಿಕವಾಗಿ ತೀರಾ ಹಿಂದುಳಿದಿವೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಮ್ಮದ್ ಉಸ್ಮಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಖುದ್ದು ಮನೆಗಳಿಗೆ ಭೇಟಿ ನೀಡಿ ನಾವು ಅವರ ಸ್ಥಿತಿಗತಿ ಪರಿಶೀಲಿಸಿದ್ದೇವೆ. ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯೂ ಉತ್ತಮವಾಗಿಲ್ಲ. ಸಂಬಂಧಿಕರು ಸಹ ಈ ಮಕ್ಕಳ ನೆರವಿಗಿಲ್ಲ. ಇವರಿಗೆ ಸುರಕ್ಷೆ ಮತ್ತು ಆಶ್ರಯ ಅಗತ್ಯವಿದೆ ಎಂದರು.

ತಂದೆ ಮತ್ತು ತಾಯಿಯನ್ನು ಕಳೆದುಕೊಂಡು ಮೂರು ಮಕ್ಕಳನ್ನು ಅಜ್ಜ, ಅಜ್ಜಿ, ಅತ್ತೆ, ಮಾವ ಹೀಗೆ ಸಂಬಂಧಿಕರ ಆಶ್ರಯದಲ್ಲಿ ಇರಿಸಲಾಗಿದೆ. ಅವರ ಪೋಷಣೆಯ ಬಗ್ಗೆ ನಾವು ಸಹ ನಿಗಾ ಇಟ್ಟಿರುತ್ತೇವೆ. ಸುರಕ್ಷೆ ಅಗತ್ಯವಿರುವ 32 ಮಕ್ಕಳಿಗೆ ‘ಪ್ರಾಯೋಜಕತ್ವ’ ಯೋಜನೆಯಡಿ ತಿಂಗಳಿಗೆ ₹ 1 ಸಾವಿರ ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಮಕ್ಕಳು ಕಂಡು ಬಂದರೆ ಮಕ್ಕಳ ಸಹಾಯವಾಣಿ 1098, 14499 ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬೇಕು ಎಂದು ಕೋರಿದ್ದಾರೆ.

ಅಜ್ಜಿಯ ಆಶ್ರಯದಲ್ಲಿ ಇಬ್ಬರು ಮಕ್ಕಳು
ಅಜ್ಜಿಯ ಆಶ್ರಯದಲ್ಲಿ ಇಬ್ಬರು ಮಕ್ಕಳು ಜಿಲ್ಲೆಯಲ್ಲಿ ಮೂರು ಮಕ್ಕಳು ಕೋವಿಡ್‌ನಿಂದ ತಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ. ತಂದೆ ಮತ್ತು ತಾಯಿಯನ್ನು ಕಳೆದುಕೊಂಡ 19 ವರ್ಷ ಹಾಗೂ 7 ವರ್ಷ ಹೆಣ್ಣು ಮಕ್ಕಳು ಗೌರಿಬಿದನೂರಿನಲ್ಲಿ ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದಾರೆ. ಈ ಮಕ್ಕಳ ತಂದೆ ವ್ಯಾಪಾರ ಮಾಡಿಕೊಂಡಿದ್ದರು. ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇದ್ದಾರೆ. ಆ ಕುಟುಂಬದ 7 ವರ್ಷದ ಮಗುವಿಗೆ ಯಾವುದಾದರೂ ಉತ್ತಮ ಶಾಲೆಯಲ್ಲಿ ಶೈಕ್ಷಣಿಕ ಸೌಲಭ್ಯ ಕಲ್ಪಿಸಿಕೊಡಿ ಎಂದು ಕೋರಿದ್ದಾರೆ ಎಂದು ಮಹಮ್ಮದ್ ಉಸ್ಮಾನ್ ತಿಳಿಸಿದರು. ಚಿಂತಾಮಣಿ ತಾಲ್ಲೂಕಿನಲ್ಲಿ 13 ಮತ್ತು 15 ವರ್ಷದ ಸಹೋದರಿಯರ ತಂದೆ, ತಾಯಿ ಮೃತಪಟ್ಟಿದ್ದಾರೆ. ಸದ್ಯ ಈ ಹೆಣ್ಣು ಮಕ್ಕಳು ಸೋದರ ಮಾವನ ಆಶ್ರಯದಲ್ಲಿ ಇದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.