ADVERTISEMENT

ಗ್ರಾಮೀಣ ಪ್ರದೇಶಕ್ಕೆ 3,604 ಬಸ್‌: ವಿ. ಸುನಿಲ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 16:53 IST
Last Updated 22 ಫೆಬ್ರುವರಿ 2023, 16:53 IST
   

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಬಸ್‌ ಸೇವೆ ಒದಗಿಸುವುದಕ್ಕಾಗಿ 3,604 ಹೊಸ ಬಸ್‌ಗಳನ್ನು ಖರೀದಿಸಲಾಗುತ್ತಿದೆ ಎಂದು ಇಂದನ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದರು.

ವಿಧಾನಸಭೆಯಲ್ಲಿ ಬುಧವಾರ ಕಾಂಗ್ರೆಸ್‌ನ ಈ. ತುಕಾರಾಂ ಪ್ರಶ್ನೆಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಪರವಾಗಿ ಉತ್ತರಿಸಿದ ಅವರು, ‘ಶಾಲಾ– ಕಾಲೇಜುಗಳು ಪುನರಾರಂಭವಾಗುವ ಜೂನ್‌ ತಿಂಗಳ ವೇಳೆಗೆ ಹೊಸ ಬಸ್‌ಗಳನ್ನು ಸೇವೆಗೆ ಒದಗಿಸಲಾಗುವುದು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗಾಗಿ 800 ಬಸ್‌ಗಳನ್ನು ಖರೀದಿಸುವ ಪ್ರಸ್ತಾವಕ್ಕೂ ಸಂಪುಟ ಒಪ್ಪಿಗೆ ನೀಡಿದೆ’ ಎಂದರು.

ಕಲ್ಯಾಣ ಕರ್ನಾಟಕ ವ್ಯಾಪ್ತಿಯ 41 ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ಸಾರಿಗೆ ನಿಗಮದ 45 ಘಟಕಗಳಿಗೆ. ಅಲ್ಲಿ ಹೆಚ್ಚಿನ ಬಸ್‌ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. 925 ಚಾಲಕರು, 694 ಚಾಲಕ ಕಂ ನಿರ್ವಾಹಕರು ಮತ್ತು 300 ನಿರ್ವಾಹಕರ ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ADVERTISEMENT

ಕಾಂಗ್ರೆಸ್‌ನ ಡಾ. ರಂಗನಾಥ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕುಣಿಗಲ್‌ ತಾಲ್ಲೂಕಿನಲ್ಲಿ 315 ಗ್ರಾಮಗಳ ಪೈಕಿ 297 ಗ್ರಾಮಗಳಿಗೆ ಕೆಎಸ್ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. 18 ಗ್ರಾಮಗಳಲ್ಲಿ ರಸ್ತೆಗಳು ಭಾರಿ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.