ADVERTISEMENT

39 ಸಾವಿರ ಕೋಟಿ ವರಮಾನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಸುವರ್ಣ ವಿಧಾನಸೌಧ (ಬೆಳಗಾವಿ): ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ರಾಜ್ಯ ಸರ್ಕಾರ ವಿವಿಧ ಮೂಲಗಳಿಂದ 39,018 ಕೋಟಿ ರೂಪಾಯಿ ವರಮಾನ ಸಂಗ್ರಹಿಸಿದೆ. ಇದೇ ಅವಧಿಯಲ್ಲಿ ವಿವಿಧ ಬಾಬ್ತುಗಳಿಗಾಗಿ 38,072 ಕೋಟಿ ರೂಪಾಯಿ ವೆಚ್ಚ ಮಾಡಿದೆ.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಪುಟ್ಟರಂಗ ಶೆಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸೆಪ್ಟೆಂಬರ್ ಅಂತ್ಯದವರೆಗಿನ ವರಮಾನ ಮತ್ತು ವೆಚ್ಚದ ವಿವರ ನೀಡಿದರು. 13 ಆದಾಯ ಮೂಲಗಳಿಂದ ಈ ಅವಧಿಯಲ್ಲಿ ರೂ 39,018 ಕೋಟಿ ವರಮಾನ ಸಂಗ್ರಹವಾಗಿದೆ.

ಇದೇ ಅವಧಿಯಲ್ಲಿ ಯೋಜನಾ ವಲಯದ ಕಾರ್ಯಕ್ರಮಗಳಿಗೆ ರೂ 12,025 ಕೋಟಿ ಮತ್ತು ಯೋಜನೇತರ ಬಾಬ್ತುಗಳಿಗೆ ರೂ 26,047 ಕೋಟಿ ವೆಚ್ಚ ಮಾಡಲಾಗಿದೆ ಎಂದು ವಿವರ ನೀಡಿದರು. ಶಿಕ್ಷಣ ಇಲಾಖೆಯಲ್ಲಿ ಅತ್ಯಧಿಕ ವೆಚ್ಚ ಮಾಡಲಾಗಿದೆ. ಯೋಜನಾ ವಲಯದ ಕಾರ್ಯಕ್ರಮಗಳಿಗೆ ರೂ 1,343 ಕೋಟಿ ಮತ್ತು ಯೋಜನೇತರ ಉದ್ದೇಶಗಳಿಗೆ ರೂ 5,656 ಕೋಟಿ ವೆಚ್ಚ ಮಾಡಲಾಗಿದೆ.

ಆರ್ಥಿಕ ಇಲಾಖೆಯಲ್ಲಿ ಯೋಜನಾ ಕಾರ್ಯಕ್ರಮಗಳಿಗೆ ಕೇವಲ ಮೂರು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ, ಯೋಜನೇತರ ಬಾಬ್ತುಗಳಿಗೆ ರೂ 3,484 ಕೋಟಿ ವೆಚ್ಚವಾಗಿದೆ.ಗೃಹ ಇಲಾಖೆಯಲ್ಲಿ ಯೋಜನೆ ಮತ್ತು ಯೋಜನೇತರ ಬಾಬ್ತುಗಳಿಗೆ ಅನುಕ್ರಮವಾಗಿ ರೂ 44 ಕೋಟಿ ಮತ್ತು ರೂ 1,431 ಕೋಟಿ ವೆಚ್ಚವಾಗಿದೆ.

ಕಂದಾಯ ಇಲಾಖೆಯಲ್ಲಿ ಈ ಎರಡೂ ವಲಯಗಳಿಗೆ ಕ್ರಮವಾಗಿ ರೂ 259 ಕೋಟಿ ಮತ್ತು ರೂ 1,295 ಕೋಟಿ ಖರ್ಚಾಗಿದೆ. ಇಂಧನ ಇಲಾಖೆಯಲ್ಲಿ ಯೋಜನಾ ಉದ್ದೇಶಕ್ಕೆ 368 ಕೋಟಿ ರೂಪಾಯಿ ವೆಚ್ಚ ಮಾಡಿದ್ದರೆ, ಯೋಜನೇತರ ಉದ್ದೇಶಕ್ಕೆ ರೂ 3,063 ಕೋಟಿ ವಿನಿಯೋಗಿಸಲಾಗಿದೆ. ರಾಜ್ಯ ಸರ್ಕಾರದ ಸಾಲದ ಮೇಲಿನ ಅಸಲು ಮತ್ತು ಬಡ್ಡಿ ಪಾವತಿಗೆ ರೂ 4,237 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿಯವರು ಹೇಳಿದರು..

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.