ADVERTISEMENT

39 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಗಿತ: ಸಚಿವ ಕೆ.ಎಸ್‌.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 22:05 IST
Last Updated 15 ಡಿಸೆಂಬರ್ 2021, 22:05 IST
   

ಬೆಳಗಾವಿ (ಸುವರ್ಣ ವಿಧಾನಸೌಧ): ಸುಸ್ಥಿರ ನೀರಿನ ಲಭ್ಯತೆ ಬಗ್ಗೆ ಅಧ್ಯಯನ ನಡೆಸದೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರಿಂದ ಸಾವಿರಾರು ಕೋಟಿ ನಷ್ಟ ಉಂಟಾಗಿದ್ದು, 39 ಯೋಜನೆಗಳು ಸ್ಥಗಿತಗೊಂಡಿವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

ವಿಧಾನಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ದುರ್ಯೋದನ ಐಹೊಳೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ’ಯೋಜನೆಗಳ ತಾಂತ್ರಿಕ ಕಾರ್ಯಸಾಧ್ಯತೆಗಳ ಪರಿಶೀಲಿಸದೆ ಪೈಪ್‌ಲೈನ್‌ ಸೇರಿದಂತೆ ಎಲ್ಲ ಕಾಮಗಾರಿಗಳನ್ನು ನಡೆಸಲಾಗಿದೆ‘ ಎಂದರು.

ಸರ್ವರ್‌ಗಳ ಸಂಗ್ರಹ ಸಾಮರ್ಥ್ಯ ದ್ವಿಗುಣ: ಬಿಜೆಪಿಯ ಯು. ರಾಜೇಶ್‌ ನಾಯಕ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ’ಇ–ಸ್ವತ್ತು ತಂತ್ರಾಂಶದ ಸರ್ವರ್‌ಗಳಿಗೆ ಒಂದು ಸಾಫ್ಟ್‌ವೇರ್‌ ಅನ್ನು ಸಕ್ರಿಯಗೊಳಿಸಿದ್ದರಿಂದ ಒಂದು ತಿಂಗಳಿಂದ ಸರ್ವರ್‌ ಸಮಸ್ಯೆ ಉಂಟಾಗಿತ್ತು. ಈಗ ಆ ಸಮಸ್ಯೆಯನ್ನು ಬಗೆಹರಿಸಲಾಗಿದೆ‘ ಎಂದರು.

ADVERTISEMENT

ರಾಜ್ಯ ದತ್ತಾಂಶ ಕೇಂದ್ರದಲ್ಲಿರುವ ಇ– ಸ್ವತ್ತು ತಂತ್ರಾಂಶಕ್ಕೆ ಸಂಬಂಧಿಸಿದ ನಾಲ್ಕು ಸರ್ವರ್‌ಗಳ ಸಂಗ್ರಹ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಾಗಿದೆ. ಭವಿಷ್ಯದಲ್ಲಿ ಸರ್ವರ್‌ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ರಾಜೇಶ್‌ ನಾಯಕ್‌ ಮಾತನಾಡಿ, ’ಆಸ್ತಿ ಖರೀದಿಗೆ ಬ್ಯಾಂಕ್‌ಗಳಲ್ಲಿ ಸಾಲ ತೆಗೆಯುವಾಗ ಮಾಲೀಕನ ಹೆಸರಿನ ಜಾಗದಲ್ಲಿ ಬ್ಯಾಂಕ್‌ ಹೆಸರು ಬರುತ್ತಿದೆ. ಇದಕ್ಕೆ ಸರ್ವರ್‌ ಸಮಸ್ಯೆ ಕಾರಣ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವರ್‌ ಸಮಸ್ಯೆ ಈಗಲೂ ಇದೆ‘ ಎಂದು ಗಮನ ಸೆಳೆದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಈಶ್ವರಪ್ಪ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.