ADVERTISEMENT

ಗಡಿ ನಗರದಲ್ಲೇ ಮೂರನೇ ವಿಶ್ವ ಕನ್ನಡ ಸಮ್ಮೇಳನ: ಬೊಮ್ಮಾಯಿ

ಕನ್ನಡ ಭವನ ಹಾಗೂ ರಂಗಮಂದಿರ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 16:16 IST
Last Updated 27 ಡಿಸೆಂಬರ್ 2022, 16:16 IST
ಬೆಳಗಾವಿಯ ಕನ್ನಡ ಭವನ ಹಾಗೂ ರಂಗಮಂದಿರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಲೋಕಾರ್ಪಣೆ ಮಾಡಿದರು
ಬೆಳಗಾವಿಯ ಕನ್ನಡ ಭವನ ಹಾಗೂ ರಂಗಮಂದಿರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಲೋಕಾರ್ಪಣೆ ಮಾಡಿದರು   

ಬೆಳಗಾವಿ: ‘ಗಡಿ ಭಾಗದ ನಗರದಲ್ಲೇ ಮುಂದಿನ ವಿಶ್ವ ಕನ್ನಡ ಸಮ್ಮೇಳನ ನಡೆಸುತ್ತೇವೆ. ಇದು ಬೇರೆ ನಗರದಲ್ಲಿ ಆಯೋಜನೆಗೊಂಡರೂ ಬೆಳಗಾವಿಗರ ನೇತೃತ್ವದಲ್ಲೇ ನಡೆಯಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ನಿರ್ಮಿಸಿದ ಕನ್ನಡ ಭವನ ಹಾಗೂ ರಂಗಮಂದಿರವನ್ನು ಮಂಗಳವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ಮೊದಲ ವಿಶ್ವ ಕನ್ನಡ ಸಮ್ಮೇಳನ ಮೈಸೂರಿನಲ್ಲಿ, ಎರಡನೇ ಸಮ್ಮೇಳನ ಬೆಳಗಾವಿಯಲ್ಲಿ ನಡೆದಿತ್ತು. ಈಗ ಮೂರನೇ ಸಮ್ಮೇಳನ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.

‘ಕನ್ನಡ ಭಾಷೆ ಅಂತರ್ಗತ ಶಕ್ತಿ ಹೊಂದಿದ್ದು, ಜಗತ್ತಿನಲ್ಲಿ ಯಾರಿಂದಲೂ ಕನ್ನಡ ಭಾಷೆ ಅಳಿಸಲು ಸಾಧ್ಯವಿಲ್ಲ. ಮನುಷ್ಯರ ಹಾಗೂ ಪ್ರಾಣಿಗಳಿಗೆ ಇರುವ ವ್ಯತ್ಯಾಸವೆಂದರೆ ಅಭಿವ್ಯಕ್ತಿ. ಮನುಷ್ಯರು ಮನದಾಳದ ಭಾವನೆಯನ್ನು ಭಾಷೆ ಮೂಲಕ ಅಭಿವ್ಯಕ್ತಿ ಮಾಡುತ್ತಾರೆ. ಹಾಗಾಗಿ, ಜಗತ್ತಿನಲ್ಲಿ ಎಲ್ಲೇ ಹೋದರು ನಮ್ಮ ಅಭಿವ್ಯಕ್ತಿಯ ಭಾಷೆ ಮರೆಯಬಾರದು’ ಎಂದರು.

ADVERTISEMENT

‘ಪ್ರಾಚೀನ ಭಾಷೆಯಾದ ಕನ್ನಡಕ್ಕೆ ವೈವಿಧ್ಯತೆಯಿದೆ. ವಚನ ಹಾಗೂ ದಾಸ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿವೆ. ಕನ್ನಡ ಸಾಕ್ಷಿಪ್ರಜ್ಞೆ ಮಾನವೀಯ ನೆಲೆ ಹೊಂದಿದೆ. ಈ ಮಾನವೀಯ ನೆಲೆಯನ್ನು ಬಸವಣ್ಣ, ಅಲ್ಲಮಪ್ರಭು, ದಾಸರ ಸಾಹಿತ್ಯದಲ್ಲಿ ಕಾಣಬಹುದು’ ಎಂದರು.

‘ಗಡಿ ಭಾಗದಲ್ಲಿ ಇಲ್ಲದ ಸಮಸ್ಯೆ ಹುಟ್ಟುಲಾಗಿದೆ. ಇಲ್ಲಿ ವಾಸಿಸುವ ಬಹಳ ಜನರು ಸಾಮರಸ್ಯದಿಂದ ಬುದುಕಿದ್ದಾರೆ. ನಾವೆಲ್ಲರೂ ಕನ್ನಡ ರಕ್ಷಣೆಗೆ ಸದಾ ನಿಲ್ಲಬೇಕು’ ಎಂದೂ ಕರೆ ನೀಡಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಕನ್ನಡ ಭವನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕಲೆ, ಸಾಂಸ್ಕೃತಿಕ ಕಾರ್ಯಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕನ್ನಡ ಭವನ ನಿರ್ಮಿಸಲಾಗಿದೆ. ಭಾಷಾತೀತವಾಗಿ ಇದು ಬಳಕೆಯಾಗಲಿದೆ’ ಎಂದರು.

ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲಾ ಅಂಗಡಿ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಕಸಪಾ ಅಧ್ಯಕ್ಷ ಮಹೇಶ್ ಜೋಶಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಚಲನಚಿತ್ರ ಕಲಾವಿದೆ ಗಿರಿಜಾ ಲೊಕೇಶ್, ಕನ್ನಡ ಭವನ ಆಡಳಿತ ಮಂಡಳಿ ಗೌರವಾಧ್ಯಕ್ಷರಾದ ಅಲ್ಲಮಪ್ರಭು ಸ್ವಾಮೀಜಿ, ಎಂ.ಸಿ.ಎ ಅಧ್ಯಕ್ಷ ಎಂ.ಎಸ್.ಕರಿಗೌಡರ್ ವೇದಿಕೆ ಮೇಲಿದ್ದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಸ್ವಾಗತಿಸಿದರು. ಸಾಹಿತಿ ಬಸವರಾಜ ಜಗಜಂಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.