ADVERTISEMENT

ಬೌದ್ಧ ಧಮ್ಮ ದೀಕ್ಷೆ ಪಡೆದ 417 ಮಂದಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 19:30 IST
Last Updated 14 ಅಕ್ಟೋಬರ್ 2022, 19:30 IST
ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ನಡೆದ ಬೌದ್ಧ ಧಮ್ಮ ದೀಕ್ಷಾ ಸಮಾರಂಭದಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್ ಮೊಮ್ಮಗಳು ರಮಾತಾಯಿ ಮಾತನಾಡಿದರು
ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ನಡೆದ ಬೌದ್ಧ ಧಮ್ಮ ದೀಕ್ಷಾ ಸಮಾರಂಭದಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್ ಮೊಮ್ಮಗಳು ರಮಾತಾಯಿ ಮಾತನಾಡಿದರು   

ಯಾದಗಿರಿ: ಜಿಲ್ಲೆಯ ಸುರಪುರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಶುಕ್ರವಾರ ಬುದ್ಧ ವಿಹಾರ ಟ್ರಸ್ಟ್ ಮತ್ತು ದಲಿತ ಸಂಘಟನೆಗಳ ಸಹಯೋಗದಲ್ಲಿ ನಡೆದ ಬೌದ್ಧ ಧಮ್ಮ ದೀಕ್ಷೆ ಕಾರ್ಯಕ್ರಮ ದಲ್ಲಿ 417 ಮಂದಿ ಬೌದ್ಧ ಧರ್ಮ ಸ್ವೀಕರಿಸಿದರು.

ಬೀದರ್‌ನ ಅಣದೂರು ಬುದ್ಧ ವಿಹಾರ ಭಂತೆ ವರಜ್ಯೋತಿ ಮತ್ತು ಸಂವಿ ಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್ ಮೊಮ್ಮಗಳು ರಮಾತಾಯಿ ಅವರ ಸಮ್ಮುಖದಲ್ಲಿ ಜನರು ಹಿಂದೂ ಧರ್ಮ ತ್ಯಜಿಸಿದರು.

ಈ ವೇಳೆ ರಮಾತಾಯಿ ಮಾತ ನಾಡಿ, ‘ಅಂಬೇಡ್ಕರ್‌ ಅವರು ಏಕಾಏಕಿ ಬೌದ್ಧ ಧರ್ಮ ಸ್ವೀಕರಿಸಿಲ್ಲ. 15 ವರ್ಷ ಅಧ್ಯಯನ ಮಾಡಿದರು. ಅಂಬೇಡ್ಕರ್‌ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು’ ಎಂದರು.

ADVERTISEMENT

ಬುದ್ಧ ವಿಹಾರ ಟ್ರಸ್ಟ್‌ನ ಅಧ್ಯಕ್ಷ ವೆಂಕಟೇಶ ಹೊಸಮನಿ ಮಾತನಾಡಿ, ‘ಹಿಂದೂ ಧರ್ಮದಲ್ಲಿ ಪರಿಶಿಷ್ಟರನ್ನು ಕೀಳಾಗಿ ಕಾಣಲಾಗುತ್ತಿದೆ. ಅದಕ್ಕೆ ಸ್ವಇಚ್ಛೆಯಿಂದ ಬೌದ್ಧ ಧರ್ಮ ಸ್ವೀಕರಿಸಿದ್ದೇವೆ. ಇದು ಮತಾಂತರವಲ್ಲ; ದೀಕ್ಷಾ ಪಡೆದಿದ್ದೇವೆ’ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ (ಅಂಬೇಡ್ಕರ್ ವಾದ) ಮಾವಳ್ಳಿ ಶಂಕರ್ ಮಾತನಾಡಿ, ‘ರಾಜ್ಯದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತ ಇದೆ. ಮುಖ್ಯಮಂತ್ರಿ ಸೇರಿ ಹಲವರು ಪರಿಶಿಷ್ಟರ ಮನೆಯಲ್ಲಿ ಊಟ ಮಾಡುವ ಗಿಮಿಕ್ ಮಾಡುತ್ತಾರೆ. ಇದರಿಂದ ಅಸ್ಪೃಶ್ಯತೆ ನಿವಾರಣೆಯಾಗದು’ ಎಂದರು.

ತ್ರಿಸರಣ ಪಂಚಶೀಲ ಅಷ್ಟಾಂಗ ಮಾರ್ಗ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ 22 ಪ್ರತಿಜ್ಞಾ ವಿಧಿಗಳನ್ನು ಬೋಧಿಸಲಾಯಿತು. ಇದಕ್ಕೂ ಮುನ್ನ ಬೈಕ್‌ ರ‍್ಯಾಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.