ADVERTISEMENT

43 ಹೊಸ ತಾಲ್ಲೂಕು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2013, 19:59 IST
Last Updated 8 ಫೆಬ್ರುವರಿ 2013, 19:59 IST

ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ಎಂ.ಬಿ.ಪ್ರಕಾಶ್ ನೇತೃತ್ವದ ತಾಲ್ಲೂಕು ಪುನರ್ ರಚನಾ ಸಮಿತಿ ಒಟ್ಟು 43 ಹೊಸ ತಾಲ್ಲೂಕು ರಚನೆಗೆ ಶಿಫಾರಸು ಮಾಡಿತ್ತು. ಆ ಪಟ್ಟಿಯಿಂದ 26 ಕೇಂದ್ರಗಳನ್ನಷ್ಟೇ ಆರಿಸಿಕೊಂಡು, ಸರ್ಕಾರವೇ 17 ಊರುಗಳನ್ನು ಸೇರ್ಪಡೆ ಮಾಡಿ 43 ಹೊಸ ತಾಲ್ಲೂಕುಗಳನ್ನು ರಚಿಸಲು ತೀರ್ಮಾನಿಸಿದೆ.

ಪ್ರಕಾಶ್ ಸಮಿತಿ ವರದಿಯಲ್ಲಿ ಇಲ್ಲದ ಆದರೆ ಸರ್ಕಾರವೇ ಸೇರ್ಪಡೆ ಮಾಡಿದ ತಾಲ್ಲೂಕುಗಳು:
ಇಳಕಲ್, ಕಾಗವಾಡ, ನ್ಯಾಮತಿ, ಚಿಟಗುಪ್ಪ, ಕಂಪ್ಲಿ, ಅಣ್ಣಿಗೇರಿ, ಅಳ್ನಾವರ, ಗಜೇಂದ್ರಗಡ, ಲಕ್ಷ್ಮೇಶ್ವರ, ಶಹಾಬಾದ್, ವಡಗೇರಾ, ಕಾರಟಗಿ, ಬ್ರಹ್ಮಾವರ, ಬೈಂದೂರು, ಕಡಬ, ಬಬಲೇಶ್ವರ ಮತ್ತು ನಿಡಗುಂದಿ.

ಪ್ರಕಾಶ್ ಸಮಿತಿ ಶಿಫಾರಸು ಮಾಡಿದ, ಆದರೆ ಸರ್ಕಾರ ಕೈಬಿಟ್ಟ ತಾಲ್ಲೂಕುಗಳು
ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ, ವಿಜಯನಗರ, ಬನಶಂಕರಿ ಮತ್ತು ಕೆ.ಆರ್.ಪುರ, ತುಮಕೂರು ಜಿಲ್ಲೆಯ ಕಳ್ಳಂಬೆಳ್ಳ, ಮೈಸೂರು ಜಿಲ್ಲೆಯ ಸರಗೂರು ಮತ್ತು ಮೈಸೂರು ನಗರ, ಉಡುಪಿ ಜಿಲ್ಲೆಯ ಹೆಬ್ರಿ, ಚಿತ್ರದುರ್ಗ ಜಿಲ್ಲೆಯ ಪರಶುರಾಮಪುರ ಮತ್ತು ಚಿತ್ರದುರ್ಗ ದಕ್ಷಿಣ, ದಾವಣಗೆರೆ ಜಿಲ್ಲೆಯ ದಾವಣಗೆರೆ ನಗರ.

`ತುಂಬ ಖುಷಿಯಾಗಿದೆ...'
ಬೆಂಗಳೂರು:`ರಾಜ್ಯ ಸರ್ಕಾರ 43 ಹೊಸ ತಾಲ್ಲೂಕುಗಳನ್ನು ರಚಿಸುವ ಘೋಷಣೆ ಮಾಡಿರುವುದು ನನಗೆ ತುಂಬ ಖುಷಿ ತಂದಿದೆ' ಎಂದು ಎಂ.ಬಿ.ಪ್ರಕಾಶ್ ಪ್ರತಿಕ್ರಿಯಿಸಿದರು. ಪ್ರಕಾಶ್ ಅವರು 2007ರಲ್ಲಿ ರಚನೆಯಾಗಿದ್ದ ತಾಲ್ಲೂಕು ಪುನರ್ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು.

`ನಾನು ಶಿಫಾರಸು ಮಾಡಿದ್ದ ಬಹುತೇಕ ಪಟ್ಟಣಗಳು ತಾಲ್ಲೂಕು ಕೇಂದ್ರಗಳಾಗುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ವರದಿ ಪೂರ್ಣವಾಗಿ ಅನುಷ್ಠಾನಕ್ಕೆ ಬರಬೇಕಿತ್ತು ಎಂದು ನಿರೀಕ್ಷಿಸುವುದು ಸರಿಯಲ್ಲ. ಇಷ್ಟಾದರೂ ಆಗಿದೆಯಲ್ಲ ಎಂಬ ಸಮಾಧಾನ ಇದೆ. ಹೊಸ ತಾಲ್ಲೂಕುಗಳ ರಚನೆ, ಆಡಳಿತ ಯಂತ್ರ ಜನರ ಸಮೀಪಕ್ಕೆ ಹೋಗಲು ನೆರವಾಗಲಿದೆ' ಎಂದು ಅವರು `ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT