ಬೆಂಗಳೂರು: `ನೆಮ್ಮದಿ~ ಯೋಜನೆಯನ್ನು ಕಂದಾಯ ಇಲಾಖೆ ವ್ಯಾಪ್ತಿಗೆ ತಂದು, ಪುನಶ್ಚೇತನಗೊಳಿಸುವ ದೃಷ್ಟಿಯಿಂದ ಹೋಬಳಿ ಮಟ್ಟದಲ್ಲಿ ಹೊಸದಾಗಿ 447 ನಾಡ ಕಚೇರಿಗಳನ್ನು ತೆರೆಯಲು ಸಚಿವ ಸಂಪುಟ ತೀರ್ಮಾನಿಸಿದೆ.
ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು, ನಾಡ ಕಚೇರಿಗಳಿಗೆ ಅಗತ್ಯವಿರುವ ಉಪ ತಹಶೀಲ್ದಾರ್ ಹುದ್ದೆಗಳನ್ನು ಸೃಷ್ಟಿಸಲಾಗುತ್ತದೆ ಎಂದು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ನಾಡ ಕಚೇರಿಗಳ ಸ್ಥಾಪನೆಗೆ 37 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಅಲ್ಲದೆ ಅವುಗಳ ವಾರ್ಷಿಕ ನಿರ್ವಹಣೆಗೆ 12 ಕೋಟಿ ಖರ್ಚಾಗಲಿದೆ. ಬರುವ ದಿನಗಳಲ್ಲಿ ನೆಮ್ಮದಿ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಉದ್ದೇಶವಿದೆ. 1,294 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ಭರ್ತಿ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಪ್ರೌಢಶಾಲಾ ಮುಖ್ಯಶಿಕ್ಷಕರಾಗಿ ಆಯ್ಕೆಗೊಂಡು ನೇಮಕಾತಿ ಆದೇಶಕ್ಕಾಗಿ ಕಾಯುತ್ತಿರುವ 629 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ತೀರ್ಮಾನಿಸಲಾಗಿದೆ.
ಟ್ರಾನ್ಸ್ ಇಂಡಿಯಾ ಶಿಫಿಂಗ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ, ಉಕ್ಕು ಉತ್ಪಾದನಾ ಘಟಕ ಸ್ಥಾಪಿಸಲು ಮುಂದೆ ಬಂದಿದ್ದು, ಆ ಸಂಸ್ಥೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ಮತ್ತು ಹೊಳಲ್ಕೆರೆ ತಾಲ್ಲೂಕಿಗೆ ಸೇರಿದ 440 ಎಕರೆ ಸರ್ಕಾರಿ ಭೂಮಿಯನ್ನು ಮಾರುಕಟ್ಟೆ ದರದಲ್ಲಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ. 72 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕವನ್ನು ಸಹ ಈ ಸಂಸ್ಥೆ ಆರಂಭಿಸಲಿದೆ.
ಹೆಲಿಕಾಪ್ಟರ್ ಘಟಕ: ಕೇಂದ್ರದ ರಕ್ಷಣಾ ಇಲಾಖೆ ಬೀದರ್‌ನಲ್ಲಿ ಎಚ್‌ಎಎಲ್ ವತಿಯಿಂದ ಹೆಲಿಕಾಪ್ಟರ್ ತಯಾರಿಕಾ ಘಟಕ ಸ್ಥಾಪಿಸಲು 500 ಎಕರೆ ಭೂಮಿ ನೀಡುವಂತೆ ಮನವಿ ಮಾಡಿತ್ತು. ಬೀದರ್ ತಾಲ್ಲೂಕಿನಲ್ಲಿ 384 ಎಕರೆ, ಭಾಲ್ಕಿ ತಾಲ್ಲೂಕಿನಲ್ಲಿ 348 ಹಾಗೂ ಔರಾದ್‌ನಲ್ಲಿ 326 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದೆ. ಈ ಮೂರರಲ್ಲಿ ರಕ್ಷಣಾ ಇಲಾಖೆ ಯಾವ ಜಾಗ ಸೂಕ್ತ ಎಂದು ತಿಳಿಸುತ್ತದೊ ಆ ಜಾಗವನ್ನು ಸರ್ಕಾರ ನೀಡಲಿದೆ ಎಂದು ಅವರು ಹೇಳಿದರು.
ಮೈಸೂರಿನ ಚಾಮುಂಡಿ ಅತಿಥಿ ಗೃಹದ ಹಿಂಭಾಗ 14.66 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲಾಗುತ್ತದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ರೂ 4.66 ಕೋಟಿ, ಮಹಾನಗರ ಪಾಲಿಕೆ ಮೂರು ಕೋಟಿ ರೂಪಾಯಿ, ಸಮಾಜ ಕಲ್ಯಾಣ ಇಲಾಖೆ 6.50 ಕೋಟಿ ರೂಪಾಯಿ ಹಾಗೂ ಜಿ.ಪಂ 50 ಲಕ್ಷ ರೂಪಾಯಿ ವೆಚ್ಚ ಮಾಡಲಿದೆ.
53 ಕೋಟಿ ರೂಪಾಯಿ ವೆಚ್ಚದಲ್ಲಿ ಕೆ-ಕಿಸಾನ್ ಯೋಜನೆಯನ್ನು ರೂಪಿಸಿ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಬೆಳೆ ಆಯ್ಕೆ, ಉತ್ಪಾದನಾ ಕ್ರಮ, ರಸಗೊಬ್ಬರ ಬಳಕೆ, ಮಣ್ಣಿನ ಆರೋಗ್ಯ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
747 ರೈತ ಸಂಪರ್ಕ ಕೇಂದ್ರಗಳು, 176 ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, 23 ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು, 48 ಪ್ರಯೋಗಾಲಯಗಳು, 38 ಜಂಟಿ ನಿರ್ದೇಶಕರ ಕಚೇರಿಗಳಿಗೆ ಕೆ-ಕಿಸಾನ್ ಯೋಜನೆ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ.
ಸಂಪುಟ ಸಭೆಯ ಇತರ ಪ್ರಮುಖ ತೀರ್ಮಾನಗಳು:
* ಹರಿಹರದಲ್ಲಿ 5.50 ಕೋಟಿ ರೂಪಾಯಿ ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ.
* ಮದ್ದೂರು ತಾಲ್ಲೂಕಿನ ವೈದ್ಯನಾಥಪುರದಲ್ಲಿ 17.50 ಕೋಟಿ ರೂಪಾಯಿ ವೆಚ್ಚದಲ್ಲಿ ಶಿಂಷಾ ನದಿಗೆ ಸೇತುವೆ ನಿರ್ಮಾಣ.
* ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ ಡೀಮ್ಡ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಲು ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ಜನವರಿಯಲ್ಲಿ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಈಗ ಘಟನೋತ್ತರ ಅನುಮೋದನೆ.
* ಜಕ್ಕಲಮಡಗು ಜಲಾಶಯದಿಂದ ಚಿಕ್ಕಬಳ್ಳಾಪುರ ನಗರಕ್ಕೆ ನೀರು ಪೂರೈಸುವ ವಿತರಣಾ ಜಾಲವನ್ನು 11 ಕೋಟಿ ರೂ. ವೆಚ್ಚದಲ್ಲಿ ನವೀಕರಣ
* ಹಾರಂಗಿ ಬಲದಂಡೆ ನಾಲೆಯ 0-25 ಕಿ.ಮೀ.ವರೆಗೆ ಕಾಲುವೆ ದುರಸ್ತಿಗೆ ರೂಪಿಸಿರುವ 31.75 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ
* ಕಬಿನಿ ಎಡದಂಡೆ ನಾಲೆಯ 0-25 ಕಿ.ಮೀ.ವರೆಗೆ ಕಾಲುವೆ ದುರಸ್ತಿಗೆ ರೂಪಿಸಿರುವ 9.70 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಒಪ್ಪಿಗೆ.
* ಹೆಗ್ಗಡದೇವನ ಕೋಟೆ ತಾಲ್ಲೂಕಿನ ಬೆಂಜಹಳ್ಳಿ ಗ್ರಾಮದ ಬಳಿಯ ತಾರಕಾ ಎಡದಂಡೆ ನಾಲೆಯ 10 ಕಿ.ಮೀ.ವರೆಗೆ ಕಾಲುವೆ ದುರಸ್ತಿಗೆ ರೂಪಿಸಿರುವ ಏಳು ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಅನುಮೋದನೆ.
* ಬೀಳಗಿ ತಾಲ್ಲೂಕಿನ ಹೆರಕಲ್ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ 13 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಿಸುವ ಯೋಜನೆಗೆ ಒಪ್ಪಿಗೆ.
* ಹತ್ತು ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳು ವಸೂಲು ಮಾಡುವ ಬೋಧನಾ ಶುಲ್ಕವನ್ನು ಸರ್ಕಾರ ಪಡೆಯುವ ಬದಲು, ಆಯಾ ಕಾಲೇಜುಗಳಿಗೆ ನೀಡಲು ನಿರ್ಧರಿಸಲಾಗಿದೆ. ಇದರಿಂದ ವಾರ್ಷಿಕ ಸರ್ಕಾರಕ್ಕೆ ಐದು ಕೋಟಿ ರೂಪಾಯಿ ನಷ್ಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.