ADVERTISEMENT

ರಾಜ್ಯದ 7 ಸ್ಮಾರ್ಟ್‌ಸಿಟಿಗಳಿಗೆ ಇದುವರೆಗೂ ₹4,557 ಕೋಟಿ ಖರ್ಚು: ಸರ್ಕಾರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 20:26 IST
Last Updated 20 ಫೆಬ್ರುವರಿ 2024, 20:26 IST
   

ಬೆಂಗಳೂರು: ರಾಜ್ಯದ 7 ಸ್ಮಾರ್ಟ್‌ಸಿಟಿಗಳಿಗೆ ಇದುವರೆಗೂ ₹4,557 ಕೋಟಿ ಖರ್ಚು ಮಾಡಲಾಗಿದೆ. ₹1,726 ಕೋಟಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು.

ಕಾಂಗ್ರೆಸ್‌ನ ಅಬ್ದುಲ್‌ ಜಬ್ಬಾರ್‌ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡಿವೆ. ಕೇಂದ್ರ ಸರ್ಕಾರ ಕಾಮಗಾರಿಗಳ ಅನುಷ್ಠಾನಕ್ಕೆ ಜೂನ್‌–2024ರವರೆಗೆ ಅವಕಾಶ ನೀಡಿದೆ. ಎಲ್ಲ ಕಾಮಗಾರಿಗಳನ್ನೂ ನಾಲ್ಕು ತಿಂಗಳ ಒಳಗೆ ಅನುಷ್ಠಾನಗೊಳಿಸಲಾಗುವುದು ಎಂದರು.

ಬರಗಾಲದಿಂದ ರಾಜ್ಯದಲ್ಲಿ 5.11 ಲಕ್ಷ ಎಕರೆ ತೋಟಗಾರಿಕಾ ಬೆಳೆ ಹಾನಿಯಾಗಿದೆ. 30.24 ಲಕ್ಷ ರೈತರಿಗೆ  ₹573.28 ಕೋಟಿ ಪರಿಹಾರ ನೀಡಲಾಗಿದೆ ಎಂದು ತೋಟಗಾರಿಕಾ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹೇಳಿದರು.

ADVERTISEMENT

ಜೆಡಿಎಸ್‌ನ ಟಿ.ಎ. ಶರವಣ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದ ನೆರವು ದೊರೆತ ನಂತರ ಮುಂದಿನ ಪರಿಹಾರ ವಿತರಿಸಲಾಗುವುದು ಎಂದರು.

ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಬೈ–ಲಾಗಳಿಗೆ ತಿದ್ದುಪಡಿ ತರುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಸಚಿವ ಮಲ್ಲಿಕಾರ್ಜುನ್‌ ಹೇಳಿದರು.

ಗಣಿಗಾರಿಕೆಯಿಂದ ಬಾಧಿತವಾದ ಬಳ್ಳಾರಿ, ಚಿತ್ರದುರ್ಗ, ತುಮಕೂರು, ವಿಜಯನಗರ ಜಿಲ್ಲೆಗಳ 466 ಗ್ರಾಮಗಳ ಅಭಿವೃದ್ಧಿಗೆ ₹7,634 ಕೋಟಿ ಮೊತ್ತಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ. ಹೊಸ ಹಳ್ಳಿಗಳ ಸೇರ್ಪಡೆ ಅಥವಾ ಹಣವನ್ನು ಇತರೆ ಭಾಗಕ್ಕೆ ಹಂಚಿಕೆ ಮಾಡಲು ಅವಕಾಶ ಇಲ್ಲ ಎಂದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ 150 ಹೊಸ ಹಾಸ್ಟೆಲ್‌ಗಳನ್ನು ಆರಂಭಿಸಲಾಗುವುದು ಎಂದು ಸಚಿವ ಶಿವರಾಜ್‌ ತಂಗಡಗಿ ಹೇಳಿದರು.

ಬಿಜೆಪಿಯ ಹಣಮಂತಪ್ಪ ನಿರಾಣಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಾರ್ಡನ್‌ಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು. ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.