ADVERTISEMENT

5 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2011, 19:30 IST
Last Updated 30 ಸೆಪ್ಟೆಂಬರ್ 2011, 19:30 IST
5 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ
5 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ   

ಬೆಂಗಳೂರು:  ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪದ ಮೇಲೆ ಬೆಂಗಳೂರು, ಭದ್ರಾವತಿ ಮತ್ತು ಬಾಗಲಕೋಟೆಯಲ್ಲಿ ನಾಲ್ವರು ಎಂಜಿನಿಯರುಗಳು, ಆಹಾರ ಇಲಾಖೆಯ ಶಿರಸ್ತೇದಾರ್ ಮನೆಗಳ ಮೇಲೆ ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಏಳು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.

ಬೆಂಗಳೂರು ಜಲ ಮಂಡಳಿಯ ಹೆಚ್ಚುವರಿ ಮುಖ್ಯ ಎಂಜಿನಿಯರ್ ಎಸ್.ಎಂ.ರಾಮಕೃಷ್ಣ, ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಶ್ರೀರಾಮ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ)  ರಾಮಲಿಂಗಯ್ಯ, ಬಾಗಲಕೋಟೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೇದಾರ್ ಲಕ್ಷ್ಮಣ್ ಶಿವಪ್ಪ ಗೌಂಡಿ ಹಾಗೂ ಭದ್ರಾವತಿಯ ಸಣ್ಣ ನೀರಾವರಿ ಇಲಾಖೆ ಎಇಇ ಎಸ್.ರಾಮಕೃಷ್ಣಪ್ಪ ಮೇಲೆ ದಾಳಿ ನಡೆದಿದೆ.

ದಾಳಿಗೆ ಒಳಗಾದ ಎಲ್ಲ ಅಧಿಕಾರಿಗಳ ವಿರುದ್ಧ ಗುರುವಾರವೇ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಎಲ್ಲ ಆರೋಪಿಗಳ ಬಳಿಯೂ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜೀವನ್‌ಕುಮಾರ್ ಗಾಂವ್ಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಲಮಂಡಳಿಯವರೇ ಮೇಲೆ: ಎಸ್.ಎಂ.ರಾಮಕೃಷ್ಣ ಬೆಂಗಳೂರು ನಗರದಲ್ಲಿ ಎರಡು ಮನೆಗಳನ್ನು ಹೊಂದಿದ್ದಾರೆ. ಜೆ.ಪಿ.ನಗರ, ಎಚ್‌ಬಿಆರ್ ಬಡಾವಣೆ ಮತ್ತು ಮಾಗಡಿ ರಸ್ತೆಯಲ್ಲಿ ತಲಾ ಒಂದು ನಿವೇಶನವನ್ನೂ ಖರೀದಿಸಿದ್ದಾರೆ.ಎರಡು ವಾಹನಗಳಿದ್ದು, 13 ಲಕ್ಷ  ಹೂಡಿಕೆ ಮಾಡಿದ್ದಾರೆ. ಮನೆಯಲ್ಲಿ ಎರಡು ಲಕ್ಷ ನಗದು ಪತ್ತೆಯಾಗಿದ್ದು, 10 ಬ್ಯಾಂಕ್ ಖಾತೆಗಳು ಮತ್ತು ಒಂದು ಲಾಕರ್‌ನ ಕೀಲಿ ಕೈ ದೊರೆತಿದೆ.

ಸದ್ಯ ಲೋಕೋಪಯೋಗಿ ಇಲಾಖೆಯ ಎಇಇ ಹುದ್ದೆಯಲ್ಲಿರುವ ರಾಮಲಿಂಗಯ್ಯ ಮೂಲತಃ ಬೆಸ್ಕಾಂ ಉದ್ಯೋಗಿ. ನಿಯೋಜನೆ ಮೇರೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆಯಲ್ಲಿದ್ದಾರೆ. ರಾಜಧಾನಿಯ ವಿಜಯನಗರ ಮತ್ತು ಪದ್ಮನಾಭನಗರದಲ್ಲಿ ತಲಾ ಒಂದು ಮನೆ ಇದೆ.

ಕೆಂಗೇರಿ ಕೈಗಾರಿಕಾ ಬಡಾವಣೆ ಮತ್ತು ಮಲ್ಲತ್ತಹಳ್ಳಿಯಲ್ಲಿ ಒಂದೊಂದು ನಿವೇಶನವನ್ನೂ ಹೊಂದಿದ್ದಾರೆ. ಎರಡು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳಿವೆ. ಮನೆಯಲ್ಲಿ 1.08 ಲಕ್ಷ ನಗದು ಪತ್ತೆಯಾಗಿದ್ದು, ನಾಲ್ಕು ಬ್ಯಾಂಕ್ ಖಾತೆಗಳ ಪಾಸ್ ಪುಸ್ತಕಗಳು, ಎರಡು ಲಾಕರ್ ಕೀಲಿಗಳನ್ನು ತನಿಖಾ ತಂಡ ಪತ್ತೆಮಾಡಿದೆ.

ಏಳು ವಾಹನ; ಜೆಸಿಬಿ: ಬಾಗಲಕೋಟೆಯ ಲಕ್ಷ್ಮಣ ಶಿವಪ್ಪ ಗೌಂಡಿ, ನವನಗರದಲ್ಲಿ ಏಳು ಕೋಣೆಗಳ ಮನೆಯ ಒಡೆಯ. ಗೊಳಬಾವಿ ಗ್ರಾಮದಲ್ಲಿ ಪತ್ನಿಯ ಹೆಸರಿನಲ್ಲಿ ಒಂದು ಮನೆಯಿದೆ. 10 ಎಕರೆ ನೀರಾವರಿ ಭೂಮಿಯ ಒಡೆತನ ಹೊಂದಿರುವ ಆಹಾರ ಇಲಾಖೆ ಶಿರಸ್ತೇದಾರ್, ಮೂರು ಕಾರು, ನಾಲ್ಕು ದ್ವಿಚಕ್ರ ವಾಹನ ಮತ್ತು ಒಂದು ಜೆಸಿಬಿಯನ್ನೂ ಹೊಂದಿದ್ದಾರೆ.

ಭದ್ರಾವತಿಯ ಎಂಜಿನಿಯರ್ ರಾಮಕೃಷ್ಣಪ್ಪ ಮನೆಯಲ್ಲಿ ಬರೋಬ್ಬರಿ 2.5 ಕೆ.ಜಿ. ಚಿನ್ನ ಮತ್ತು 5.5 ಕೆ.ಜಿ. ಬೆಳ್ಳಿ ಪತ್ತೆಯಾಗಿದೆ. ಮೂರು ಲಕ್ಷ   ನಗದು ಕೂಡ ಮನೆಯಲ್ಲಿತ್ತು. 10 ಎಕರೆ ನೀರಾವರಿ ಭೂಮಿ, ಒಂದು ಮನೆ, ಎರಡು ತೋಟದ ಮನೆಗಳು, ಐದು ನಿವೇಶನ ಹೊಂದಿರುವ ಇವರ ಬಳಿ ಎರಡು ಕಾರು ಮತ್ತು ಮೂರು ದ್ವಿಚಕ್ರ ವಾಹನಗಳೂ ಇವೆ ಎಂಬುದು ಲೋಕಾಯುಕ್ತ ಪೊಲೀಸರ ದಾಳಿಯಲ್ಲಿ ಪತ್ತೆಯಾಗಿದೆ.

ದಾಳಿಯಲ್ಲಿ 20ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಐವತ್ತಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು. 6 ಗಂಗೆ ಆರಂಭವಾದ ದಾಳಿ ಸಂಜೆಯವರೆಗೂ ಮುಂದುವರೆದಿತ್ತು. ಬ್ಯಾಂಕ್ ಲಾಕರ್‌ಗಳನ್ನು ಸೋಮವಾರ ತೆರೆದು ಪರಿಶೀಲಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.