ADVERTISEMENT

ರೈತರ ಮದುವೆಯಾಗುವ ಹೆಣ್ಣು ಮಕ್ಕಳಿಗೆ ₹ 5 ಲಕ್ಷ – CMಗೆ ರೈತ ಸಂಘದ ಅಧ್ಯಕ್ಷರ ಮನವಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 15:58 IST
Last Updated 11 ಫೆಬ್ರುವರಿ 2024, 15:58 IST
   

ಬೆಂಗಳೂರು: ‘ಬಜೆಟ್​ನಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮತ್ತು ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ₹5 ಲಕ್ಷ ಪ್ರೋತ್ಸಾಹ ಧನ ಘೋಷಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ರಾಜ್ಯದ ರೈತ ಸಂಘ ಸಂಸ್ಥೆಗಳ 200ಕ್ಕೂ ಹೆಚ್ಚು  ಪ್ರತಿನಿಧಿಗಳು ಮತ್ತು ರೈತ ಮುಖಂಡರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ 2024-25ನೇ ಸಾಲಿನ ಆಯವ್ಯಯ ಪೂರ್ವಭಾವಿ ಚರ್ಚೆ ನಡೆಸಿದರು.

ಸಭೆಯ ಬಳಿಕ ಮಾತನಾಡಿದ ಬಡಗಲಪುರ ನಾಗೇಂದ್ರ, ರೈತರು ಸಾಲದ ಸುಳಿಗೆ ಸಿಲುಕದಂತೆ ಕೃಷಿ ನೀತಿ ರೂಪಿಸಬೇಕು. ಕೃಷಿಗೆ ಬಜೆಟ್​ನಲ್ಲಿ ಹೆಚ್ಚಿನ ಒತ್ತು ನೀಡಬೇಕು, ಬರಕ್ಕೆ ಶಾಶ್ವತವಾಗಿ ಪರಿಹಾರ ಸಿಗಬೇಕಾದರೆ ಸಣ್ಣ ನೀರಾವರಿಗೆ ಒತ್ತು ಕೊಡಬೇಕು. 10 ವರ್ಷದ ಕಾರ್ಯಯೋಜನೆಯನ್ನು ಘೋಷಿಸಬೇಕೆಂದು ಮನವಿ ಮಾಡಿದ್ದೇವೆ ಎಂದರು.

ADVERTISEMENT

‘ಕೃಷಿಕರ ಮಕ್ಕಳಿಗೆ ಮದುವೆಗೆ ಕನ್ಯೆಯರು ಸಿಗುತ್ತಿಲ್ಲ. ಹೀಗಾಗಿ 45 ವರ್ಷವಾದರೂ ಮದುವೆ ಆಗುತ್ತಿಲ್ಲ. ಇದಕ್ಕೆ ಕಾರಣ ಕೃಷಿಗೆ ಆದ್ಯತೆ ಸಿಗುತ್ತಿಲ್ಲ. ಹೀಗಾಗಿ ರೈತರನ್ನು ಮದುವೆ ಆಗುವ ಕನ್ಯೆಯರಿಗೆ ₹5 ಲಕ್ಷ ಪ್ರೋತ್ಸಾಹ ಧನ ನೀಡುವಂತೆ ಮನವಿ ಮಾಡಿದ್ದೇವೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ವಾಪಸ್ ಪಡೆಯಬೇಕು ಎಂದೂ ಒತ್ತಾಯಿಸಿದ್ದೇವೆ’ ಎಂದರು.

ಪಶುಸಂಗೋಪನೆ ಸಚಿವ ವೆಂಕಟೇಶ್, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಮುಖ್ಯಮಂತ್ರಿಯ ಸಲಹೆಗಾರ ಬಿ.ಆರ್. ಪಾಟೀಲ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘಟನೆಗಳ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ವೀರಸಂಗಯ್ಯ, ಚುಕ್ಕಿ ನಂಜುಂಡಸ್ವಾಮಿ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡರಾದ ಸುನಂದಾ ಜಯರಾಂ ಇದ್ದರು.

ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಭೆ: ವಾಣಿಜ್ಯ ಸಂಸ್ಥೆಗಳ ಮುಖಂಡರ ಜೊತೆಗೂ ಮುಖ್ಯಮಂತ್ರಿ ಆಯವ್ಯಯ ಪೂರ್ವಭಾವಿ ಚರ್ಚೆ ನಡೆಸಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣಾ , ಎಫ್‌ಕೆಸಿಸಿಐ, ಕಾಸ್ಸಿಯಾ, ಜಿಎಸ್‌ಟಿ ಸಮಿತಿ, ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್ ಸೇರಿದಂತೆ ವಿವಿಧ ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.