ADVERTISEMENT

ರಾಜ್ಯದಲ್ಲಿ 500 ಕಡೆ ಆಮ್ಲಜನಕ ಉತ್ಪಾದನಾ ಘಟಕ: ಡಾ.ಸಿ.ಎನ್.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 21 ಮೇ 2021, 18:25 IST
Last Updated 21 ಮೇ 2021, 18:25 IST
ಡಾ.ಸಿ.ಎನ್.ಅಶ್ವತ್ಥನಾರಾಯಣ
ಡಾ.ಸಿ.ಎನ್.ಅಶ್ವತ್ಥನಾರಾಯಣ   

ಬೆಂಗಳೂರು: ರಾಜ್ಯದಲ್ಲಿ ಇನ್ನು ಒಂದೆರಡು ತಿಂಗಳಲ್ಲಿ 500 ಕಡೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುವುದು. ಈ ಆಸ್ಪತ್ರೆಗಳಲ್ಲಿ ಐಸಿಯುಗಳನ್ನೂ ಅಳವಡಿಸಲಾಗುವುದು ಎಂದು ಹೇಳಿದರು.

ಒಂದು ಆಮ್ಲಜನಕ ಹೊಂದಿದ ಹಾಸಿಗೆಗೆ 20 ಸಾವಿರ ಲೀಟರ್‌ ಆಮ್ಲಜನಕವನ್ನು ಪೂರೈಸಬೇಕು. ಈ ಲೆಕ್ಕವನ್ನು ನೋಡಿದರೆ, ರಾಜ್ಯದಲ್ಲಿರುವ ಎಲ್ಲ ಆಮ್ಲಜನಕ ಹಾಸಿಗೆಗಳಿಗೆ ಆಗಿ ಮಿಗುವಷ್ಟು ಆಮ್ಲಜನಕದ ತುರ್ತು ಸಂಗ್ರಹ ನಮ್ಮಲ್ಲಿದೆ. ಮೂರನೇ ಅಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಇನ್ನು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 3 ಸಾವಿರ ವೆಂಟಿಲೇಟರ್‌, 25 ಸಾವಿರ ಆಮ್ಲಜನಕ ಹಾಸಿಗೆಗಳನ್ನು ಹೆಚ್ಚುವರಿಯಾಗಿ ಒಂದು ವರ್ಷದ ಅವಧಿಯಲ್ಲಿ ಸಿದ್ಧಪಡಿಸಿದ್ದೇವೆ. ಈ ಪ್ರಮಾಣವನ್ನು ಇನ್ನೂ ಹೆಚ್ಚಿಸುತ್ತೇವೆ ಎಂದು ಹೇಳಿದರು.

ADVERTISEMENT

ಜೂನ್ 1ಕ್ಕೆ ಲಸಿಕೆಗೆ ಹೊಸ ಪೋರ್ಟಲ್: ರಾಜ್ಯದಲ್ಲಿ ಲಸಿಕೆ ನೀಡಲು ಮತ್ತು ಅದರ ಮೇಲೆ ವ್ಯವಸ್ಥಿತವಾಗಿ ನಿಗಾ ಇರಿಸಲು ಅಭಿವೃದ್ಧಿಪಡಿಸಿರುವ ಪೋರ್ಟಲ್‌ ಜೂನ್ 1ರಿಂದ ಕಾರ್ಯ ನಿರ್ವಹಿಸಲಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.