ಬೆಂಗಳೂರು: ಚಲನಚಿತ್ರ ರಸಿಕರಿಗೆ ರಸದೌತಣ ನೀಡಲು 6ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, 52 ದೇಶಗಳ 160 ಚಲನಚಿತ್ರಗಳು ಏಳು ಚಿತ್ರ ಮಂದಿರಗಳಲ್ಲಿ ಒಂದು ವಾರ ಪ್ರದರ್ಶನಗೊಳ್ಳಲಿವೆ.
ಡಿ.26ರಂದು ಸಂಜೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯುವ ಉತ್ಸವದ ಉದ್ಘಾಟನೆಯನ್ನು ಖ್ಯಾತ ಚಲನಚಿತ್ರ ನಟ ಕಮಲ್ಹಾಸನ್ ನೆರವೇರಿಸಲಿದ್ದಾರೆ. ಡಿ. 27ರಿಂದ ಜ. 2ರವರೆಗೆ ಚಲನಚಿತ್ರಗಳ ಪ್ರದರ್ಶನಗಳು ನಡೆಯಲಿವೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಈ ಚಲನಚಿತ್ರೋತ್ಸವವನ್ನು ಆಯೋಜಿಸಿದೆ.
ಏಷ್ಯಾ, ಭಾರತೀಯ, ಕನ್ನಡ ಸಿನಿಮಾಗಳು ಪ್ರತ್ಯೇಕ ಸ್ಪರ್ಧೆಯ ವಿಭಾಗಗಳಲ್ಲಿ ಪ್ರದರ್ಶನಗೊಳ್ಳಲಿವೆ. ಕನ್ನಡ ಚಿತ್ರಗಳು ಭಾರತೀಯ ಮತ್ತು ಏಷ್ಯಾ ವಿಭಾಗದ ಸ್ಪರ್ಧೆಗಳಲ್ಲೂ ಭಾಗವಹಿಸಲಿವೆ. ಇದೇ ಪ್ರಥಮ ಬಾರಿಗೆ ಪ್ರೇಕ್ಷಕರ ಮನ್ನಣೆಗಳಿಸಿದ ಚಲನಚಿತ್ರ ಪ್ರಶಸ್ತಿಯೊಂದನ್ನು ನೀಡಲಾಗುವುದು ಎಂದು ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಲನಚಿತ್ರೋತ್ಸವದ ಕಲಾ ನಿರ್ದೇಶಕ ಎಚ್.ಎನ್. ನರಹರಿರಾವ್ ಮಾತನಾಡಿ, 10 ಕನ್ನಡ ಚಲನಚಿತ್ರಗಳು ಈ ಬಾರಿ ಪ್ರದರ್ಶನಗೊಳ್ಳಲಿವೆ. ‘ಕೊಂಚಾವರಂ’ ಎನ್ನುವ ಬಂಜಾರ ಹಾಗೂ ‘ರಿಕ್ಷಾ ಡ್ರೈವರ್’ ಎನ್ನುವ ತುಳು ಸಿನಿಮಾಗಳು ಪ್ರದರ್ಶನಗೊಳ್ಳುತ್ತಿರುವುದು ವಿಶೇಷವಾಗಿದೆ. ಕೊಂಚಾವರಂ ಭಾರತೀಯ ಸಿನಿಮಾ ವಿಭಾಗ ಸ್ಪರ್ಧೆಯ ಪಟ್ಟಿಯಲ್ಲೂ ಇದೆ. ಕನ್ನಡದ ‘ಲೂಸಿಯಾ’ ಚಲನಚಿತ್ರ ಏಷ್ಯಾ ಸಿನಿಮಾ ಸ್ಪರ್ಧೆಯ ಪಟ್ಟಿಯಲ್ಲೂ ಇದೆ ಎಂದು ತಿಳಿಸಿದರು.
ಈ ಬಾರಿ ರೈಲುಗಳ ಆಧಾರಿತ ಐದು ಸಿನಿಮಾಗಳ ವಿಶೇಷ ಪ್ರದರ್ಶನವಿದೆ. ವಿವರಗಳಿಗೆ www.biffes.in ವೆಬ್ಸೈಟ್ ವೀಕ್ಷಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.