ADVERTISEMENT

ಬಸ್ಸಿನಲ್ಲಿ ಜಗಳ: ಕಂಡಕ್ಟರ್‌, ಪ್ರಯಾಣಿಕ ಇಬ್ಬರಿಗೂ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST
ಬಸ್ಸಿನಲ್ಲಿ ಜಗಳ: ಕಂಡಕ್ಟರ್‌, ಪ್ರಯಾಣಿಕ ಇಬ್ಬರಿಗೂ ಜೈಲು ಶಿಕ್ಷೆ
ಬಸ್ಸಿನಲ್ಲಿ ಜಗಳ: ಕಂಡಕ್ಟರ್‌, ಪ್ರಯಾಣಿಕ ಇಬ್ಬರಿಗೂ ಜೈಲು ಶಿಕ್ಷೆ   

ಜಮಖಂಡಿ: ಬಸ್ಸಿನಲ್ಲಿ ಜಗಳವಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸ್ಪರರ ದೂರಿನ ವಿಚಾರಣೆ ನಡೆಸಿದ ಇಲ್ಲಿನ ಪ್ರಧಾನ ಸಿವಿಲ್‌ ನ್ಯಾಯಾಲಯ, ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್‌ ಹಾಗೂ ಪ್ರಯಾಣಿಕ ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಿದೆ.

ಪ್ರಯಾಣಿಕ ಹಾಗೂ ನಿರ್ವಾಹಕರಿಬ್ಬರೂ ಪರಸ್ಪರರ ವಿರುದ್ಧ ನೀಡಿದ್ದ ದೂರನ್ನು ದಾಖಲಿಸಿಕೊಂಡಿದ್ದ ಪೊಲೀಸರು, ನ್ಯಾಯಾಲಯಕ್ಕೆ ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದರನ್ವಯ ಎರಡೂ ಪ್ರಕರಣಗಳ ಪ್ರತ್ಯೇಕ ವಿಚಾರಣೆ ನಡೆಸಿದ ನ್ಯಾಯಾಲಯ, ಕಂಡಕ್ಟರ್‌ ಯಾದಗಿರಿ ತಾಲ್ಲೂಕು ಚಂಡರಗಿ ಗ್ರಾಮದ ನಿವಾಸಿ ನರಹರಿಗೌಡ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ₹ 2,500 ದಂಡ ವಿಧಿಸಿದೆ. ಪ್ರಯಾಣಿಕ, ತಾಲ್ಲೂಕಿನ ಕುಂಚನೂರು ಗ್ರಾಮದ ಲಕ್ಷ್ಮಣ ಕಿಶೋರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ₹4,500 ದಂಡ ವಿಧಿಸಿ ಸೋಮವಾರ ಆದೇಶಿಸಿದೆ.

ಈ ಹಿಂದೆ ಜಮಖಂಡಿ ಡಿಪೊದಲ್ಲಿ ಬಸ್‌ ಕಂಡಕ್ಟರ್‌ರಾಗಿದ್ದ ನರಹರಿಗೌಡ, ಈಗ ಕಲಬುರ್ಗಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

ಪ್ರಕರಣದ ವಿವರ: 2014ರ ಸೆಪ್ಟೆಂಬರ್‌ 29ರಂದು ಕುಂಚನೂರಿನಿಂದ ಜಮಖಂಡಿಗೆ ಬರುತ್ತಿದ್ದ ಬಸ್ಸಿನಲ್ಲಿ ಶಿವಲಿಂಗ ಬಳೂಲ, ಲಕ್ಷ್ಮಣ ಕಿಶೋರಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ವೇಳೆ, ಇವರ ಹಾಗೂ ಕಂಡಕ್ಟರ್‌ ನರಹರಿಗೌಡ ನಡುವೆ ಜಗಳ ನಡೆದಿತ್ತು. ಪರಸ್ಪರರು ಕೊರಳುಪಟ್ಟಿ ಹಿಡಿದು ಎಳೆದಾಡಿ, ಜೀವ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರ
ವಾಗಿ ಎಪಿಪಿ ಹುಸೇನಸಾಬ್ ಮುಲ್ಲಾ, ಬಿ.ಡಿ.ಬಾಗವಾನ ವಕಾಲತ್ತು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.