ADVERTISEMENT

ತೇಜಸ್ವಿ ಪ್ರತಿಷ್ಠಾನಕ್ಕೆ ಬಿ.ಎಲ್‌. ಶಂಕರ್‌ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST
ಬಿ.ಎಲ್‌. ಶಂಕರ್‌
ಬಿ.ಎಲ್‌. ಶಂಕರ್‌   

ಬೆಂಗಳೂರು: ಪೂರ್ಣಚಂದ್ರ ತೇಜಸ್ವಿಯವರ ಚಿಂತನೆಗಳ ಅಧ್ಯಯನಕ್ಕೆ ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್. ಶಂಕರ್ ಅಧ್ಯಕ್ಷತೆಯಲ್ಲಿ ಸರ್ಕಾರ ಪ್ರತಿಷ್ಠಾನ ಸ್ಥಾಪಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರು ಜಿಲ್ಲೆಯ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದು, ಪದನಿಮಿತ್ತ ಮತ್ತು ಸರ್ಕಾರೇತರ 16 ಸದಸ್ಯರು ಸಮಿತಿಯಲ್ಲಿದ್ದಾರೆ.

ತೇಜಸ್ವಿಯವರ ಮನೆಯನ್ನು ಸಂಗ್ರಹಾಲಯವಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸಿವುದು; ಸಂಶೋಧನೆ ಮತ್ತು ಅಧ್ಯಯನ ಕೇಂದ್ರ, ಗ್ರಂಥಾಲಯ ಸ್ಥಾಪಿಸುವುದು; ಅವರ ಕೃತಿಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಿಸುವುದು ಪ್ರತಿಷ್ಠಾನದ ಉದ್ದೇಶವಾಗಿದೆ.

ADVERTISEMENT

ಚಾರಣ, ಪರಿಸರ ಸಂವಾದ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ, ಅವರ ಕೃತಿಗಳನ್ನು ಬಹು ಮಾಧ್ಯಮ ಸಾಧ್ಯತೆಯಲ್ಲಿ ಪ್ರಕಟಿಸುವ, ಪ್ರತಿವರ್ಷ ಪರಿಸರ, ಸಾಹಿತ್ಯ, ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಪ್ರತಿಷ್ಠಾನ ಮಾಡಲಿದೆ.

ಗ್ರಾಮ ಮತ್ತು ಶಾಲಾ– ಕಾಲೇಜುಗಳ ಮಟ್ಟದಲ್ಲಿ ಪರಿಸರಸ್ನೇಹಿ ಘಟಕಗಳನ್ನು ಸ್ಥಾಪಿಸಿ ಪರಿಸರ ಜಾಗೃತಿ ಚಟುವಟಿಕೆಗಳನ್ನು ಏರ್ಪಡಿಸುವ ಉದ್ದೇಶವಿದೆ.

ಕುವೆಂಪು ಪ್ರತಿಷ್ಠಾನದ ಮಾದರಿಯಲ್ಲೇ ತೇಜಸ್ವಿ ಪ್ರತಿಷ್ಠಾನವೂ ಕಾರ್ಯ ನಿರ್ವಹಿಸಲಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ ಸರ್ಕಾರ ₹ 5 ಕೋಟಿ ಅನುದಾನ ಮೀಸಲಿಟ್ಟಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶುಕುಮಾರ್ ತಿಳಿಸಿದ್ದಾರೆ.

ಪದನಿಮಿತ್ತ ಸದಸ್ಯರು: ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಸದಸ್ಯರು, ಮೂಡಿಗೆರೆ ಶಾಸಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು, ಚಿಕ್ಕಮಗಳೂರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್.

ಸರ್ಕಾರೇತರ ಸದಸ್ಯರು: ಲೇಖಕಿ ರಾಜೇಶ್ವರಿ ತೇಜಸ್ವಿ, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ, ಪರಿಸರ ಚಿಂತಕ ಪ್ರದೀಪ್ ಕೆಂಜಿಗೆ, ಬಿ. ಈಶ್ವರ ಪ್ರಸಾದ್, ವಿಜ್ಞಾನಿ ಎಂ. ಸಂಜಪ್ಪ, ಪರಿಸರ ಬರಹಗಾರ ನಾಗೇಶ್ ಹೆಗಡೆ ಹಾಗೂ ಆರ್. ರಾಘವೇಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.