ADVERTISEMENT

ಚನ್ನಪಟ್ಟಣ ಶಾಸಕ ಯೋಗೇಶ್ವರ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 12:13 IST
Last Updated 3 ಜನವರಿ 2018, 12:13 IST
ಚನ್ನಪಟ್ಟಣ ಶಾಸಕ ಯೋಗೇಶ್ವರ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಚನ್ನಪಟ್ಟಣ ಶಾಸಕ ಯೋಗೇಶ್ವರ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ   

ಚನ್ನಪಟ್ಟಣ: ‘ಇಲ್ಲಿನ ಶಾಸಕರು ಯಾವತ್ತೂ ವಿಧಾನಸಭೆಗೆ ಬಂದಿಲ್ಲ. ಇಲ್ಲಿನವರ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಬಜೆಟ್‌ನ ಚರ್ಚೆಯಲ್ಲೂ ಪಾಲ್ಗೊಂಡಿಲ್ಲ. ಇಂತಹವರಿಗೆ ಶಾಸಕರಾಗಿ ಇರಲು ಯಾವ ಅರ್ಹತೆ ಇದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕ ಸಿ.ಪಿ. ಯೋಗೇಶ್ವರ್‌ ವಿರುದ್ಧ ಕಿಡಿಕಾರಿದರು.

ಬುಧವಾರ ಇಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮವನ್ನು  ಯೋಗೇಶ್ವರ್ ವಿರುದ್ಧದ ಟೀಕೆಗೆ ಬಳಸಿಕೊಂಡರು. ‘ಇಲ್ಲಿನ ಕಣ್ವಾ ಏತ ನೀರಾವರಿ ಯೋಜನೆಗೆ ₨182 ಕೋಟಿ ಅನುದಾನ ಕೊಟ್ಟಿದ್ದು ನಾನು. ಆದರೆ ಶಾಸಕರು ಅದನ್ನು ತಾನೇ ಮಾಡಿದ್ದೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರಿಗೆ ಧೈರ್ಯ ಇದ್ದಿದ್ದರೆ ಇದೇ ವೇದಿಕೆಗೆ ಬಂದು ಸತ್ಯ ಹೇಳಬಹುದಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅವರೇನು ನಮ್ಮ ಪಕ್ಷದಿಂದ ಆಯ್ಕೆಯಾದ ಶಾಸಕರಲ್ಲ. ಉತ್ತರ ಪ್ರದೇಶಕ್ಕೆ ಹೋಗಿ ಬಿ ಫಾರಂ ತಂದು ಗೆದ್ದವರಿಗೆ ಸಮಾಜವಾದ ಏನು ಎಂಬುದೇ ತಿಳಿದಿಲ್ಲ. ಇಂತಹವರು ಈಗ ಕೋಮುವಾದಿ ಪಕ್ಷ ಸೇರಿದ್ದು, ಜನತೆ ತಕ್ಕ ಪಾಠ ಕಲಿಸಬೇಕು ಎಂದರು.

ADVERTISEMENT

ಲಾಯಕ್‌ ಅಲ್ಲ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಗ್ರಾಮ ಪಂಚಾಯಿತಿ ಸದಸ್ಯನಾಗಲು ಲಾಯಕ್ ಇಲ್ಲ. ಅಂತಹವರನ್ನು ಮಂತ್ರಿ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜ್ಯದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಾ ಬಂದಿದ್ದಾರೆ.  ಬಿಜೆಪಿ ನಾಯಕರಿಗೆ ಯಾವಾಗಲೂ ಎರಡು ನಾಲಿಗೆ, ಎರಡು ಮುಖ ಎಂದು ಟೀಕಿಸಿದರು.

ಹಗಲು ಕನಸು ಬೇಡ:  ‘ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಪಕ್ಷ ಅಲ್ಲ. ನಾನೂ ಒಮ್ಮೆ ಅದರ ಅಧ್ಯಕ್ಷನಾಗಿದ್ದೆ. ಹೀಗಾಗಿ ಅದರ ಆಳ–ಅಗಲ ಗೊತ್ತಿದೆ. ಅದೇನಿದ್ದರೂ 5–6 ಜಿಲ್ಲೆಗಳಿಗೆ ಸೀಮಿತ’ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಸಹ ಯೋಗೇಶ್ವರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.