ADVERTISEMENT

ಶಾಲಾ ಪ್ರಮಾಣ ಪತ್ರದಲ್ಲಿ ಏನಿದೆ ನೋಡಿ: ಯಡಿಯೂರಪ್ಪಗೆ ಬಸವರಾಜ ಹೊರಟ್ಟಿ ಸವಾಲು

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಹೊರಟ್ಟಿ
ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಹೊರಟ್ಟಿ   

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ವೀರಶೈವ ಲಿಂಗಾಯತರ ಬಗ್ಗೆ ಏಳು ತಿಂಗಳ ಬಳಿಕ ಮೊದಲ ಬಾರಿಗೆ ಬಾಯಿಬಿಟ್ಟಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ, ಅವರ ಶಾಲಾ ಪ್ರಮಾಣ ಪತ್ರದಲ್ಲಿ ವೀರಶೈವ ಇದೆಯೋ ಅಥವಾ ಲಿಂಗಾಯತ ಎಂದು ಬರೆದಿದೆಯೋ ಎನ್ನುವುದನ್ನು ಸ್ಪಷ್ಟಪಡಿಸಲಿ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಸವಾಲು ಹಾಕಿದರು.

ಜೆಡಿಎಸ್ ಕಾರ್ಯಕರ್ತರ ಸಭೆ ಬಳಿಕ ಅವರು ಬುಧವಾರ ಸುದ್ದಿಗಾರರ ಜತೆ ಮಾತನಾಡಿದರು.

‘ವೀರಶೈವ ಎನ್ನುವುದು ಯಾವಾಗ ಬಂತು. ಇದನ್ನು ಯಾರು ಮತ್ತು ಏಕೆ ಮಾಡಿದ್ದಾರೆ ಎನ್ನುವುದನ್ನು ಯಡಿಯೂರಪ್ಪ ಹೇಳಬೇಕು. ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಕೊಡಿಸಿದರೆ ಅವರ ಹಿಂದೆ ನಾವು ಹೋಗುತ್ತೇವೆ. ಇಲ್ಲದಿದ್ದರೆ ಅವರು ಧಾರ್ಮಿಕವಾಗಿ ನಮ್ಮ ಹಿಂದೆ ಬರಲಿ’ ಎಂದು ಅವರು ಸಲಹೆ ನೀಡಿದರು.

ADVERTISEMENT

‘ಸಮಾಜದ ಯುವಕರಿಗೆ ಉದ್ಯೋಗದ ವಿಷಯದಲ್ಲಿ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಲು ಹೋರಾಟ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಸಮಾಜದ ಎಲ್ಲ ಸ್ವಾಮೀಜಿಗಳು ಒಂದಾಗಿ ಈ ಸಮಸ್ಯೆ ಬಗೆಹರಿಸಿದರೆ ನಮ್ಮದೇನು ಅಭ್ಯಂತರ ಇಲ್ಲ. ಸಮಾಜ ಇಂದು ಈ ಸ್ಥಿತಿಗೆ ಬರಲು ಕೆಲ ಸ್ವಾಮೀಜಿಗಳೇ ಕಾರಣ’ ಎಂದು ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.