ADVERTISEMENT

‘ವಿದೇಶಕ್ಕೆ ಹೋಗಿದ್ದರೆ ಬದುಕಿರುತ್ತಿದ್ದ...’

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST
ತಾಯಿ ಪ್ರೇಮಲತಾ ಜತೆಗೆ ದೀಪಕ್ ರಾವ್‌
ತಾಯಿ ಪ್ರೇಮಲತಾ ಜತೆಗೆ ದೀಪಕ್ ರಾವ್‌   

ಮಂಗಳೂರು: ‘ನನ್ನ ಮಗ ನಿತ್ಯ ಮಧ್ಯಾಹ್ನ 1.30 ಗೆ ಊಟಕ್ಕೆ ಬರುತ್ತಿದ್ದ. ಬುಧವಾರವೂ ಆತನಿಗಾಗಿ ಕಾಯುತ್ತಿದ್ದೆ. ಮಧ್ಯಾಹ್ನ 3 ಗಂಟೆಯವರೆಗೂ ಕಾಯ್ದು, ಮೊಬೈಲ್‌ಗೆ ಕರೆ ಮಾಡಿದೆ. ಸ್ವಿಚ್ ಆಫ್‌ ಆಗಿತ್ತು. ಊಟಕ್ಕೆ ಬರಬೇಕಾದ ನನ್ನ ಮಗ ಇನ್ನೆಲ್ಲಿ’.

ಸುರತ್ಕಲ್‌ ಕಾಟಿಪಳ್ಳದ ಜನತಾ ಕಾಲೋನಿ ಅವರ ನಿವಾಸದಲ್ಲಿ ಗುರುವಾರ ಮಧ್ಯಾಹ್ನ ದೀಪಕ್‌ ಮೃತದೇಹದ ಅಂತಿಮ ಯಾತ್ರೆಯ ಹೊರಡುವ ಸಂದರ್ಭದಲ್ಲಿ ಒಂದೆಡೆ ಮಡುಗಟ್ಟಿದ ದುಃಖ, ಇನ್ನೊಂದೆಡೆ ದಿಕ್ಕಿಲ್ಲದಂತಾದ ಕುಟುಂಬ ಚಿಂತೆ. ಆಧಾರವಾಗಿದ್ದ ಮಗನೇ ಇಲ್ಲದಂತಾಗಿದೆ ಎನ್ನುವ ಕೊರಗು ದೀಪಕ್‌ ಅವರ ತಾಯಿ ಪ್ರೇಮಲತಾ ಅವರ ಮಾತುಗಳಲ್ಲಿ ಸ್ಪಷ್ಟವಾಗಿತ್ತು.

‘ನನ್ನ ಮಗ ಪಾಪದವ, ಅವ ಕೆಲಸಕ್ಕೆ ವಿದೇಶಕ್ಕೆ ಹೋಗುತ್ತೇನೆ ಎಂದಿದ್ದ, ನಾನೇ ಬೇಡ ಎಂದು ತಪ್ಪು ಮಾಡಿದೆ. ಹೋಗಿದ್ದರೆ ನನ್ನ ಮಗ ಬದುಕಿರುತ್ತಿದ್ದ’ ಎಂದು ಗೋಳಿಟ್ಟರು.

ADVERTISEMENT

‘ಪ್ರತಿ ದಿನ ಕೆಲಸ ಮುಗಿಸಿ ಸಂಜೆ 7 ಗಂಟೆಯೊಳಗೆ ಮನೆಗೆ ಬರುತ್ತಿದ್ದ. ಮನೆಗೆ ಆಧಾರವಾಗಿದ್ದ. ಅವನೇ ಸಾಲ ಮಾಡಿ ಮನೆ ಕಟ್ಟಿದ್ದ. ಇನ್ನು ₹2 ಲಕ್ಷ ಸಾಲ ಬಾಕಿ ಇದೆ. ಅದನ್ನು ತೀರಿಸುತ್ತೇನೆ. ನಿಮ್ಮ ಚಿನ್ನಾಭರಣಗಳನ್ನು ಬಿಡಿಸಿಕೊಂಡು ಬರುತ್ತೇನೆ ಎಂದಿದ್ದ. ನಾನು ನೀನೆ ನನಗೆ ಚಿನ್ನ ಎಂದಿದ್ದೆ’ ಎಂದು ಕಣ್ಣೀರಿಟ್ಟರು.

‘ವಾರಕ್ಕೊಮ್ಮೆ ಭಜನೆಗೆ ಹೋಗುತ್ತಿದ್ದ. ಅವನಿಗೆ ಮದುವೆ ಮಾಡಲು ಮುಂದಾಗಿದ್ದೆ’ ಎಂದು ಹೇಳುವಾಗ ಅವರ ದುಃಖ ಮತ್ತಷ್ಟು ಹೆಚ್ಚಾಗಿತ್ತು.

‘ನನ್ನ ಪಾಪದ ಮಗನನ್ನು ಕೊಂದವರಿಗೆ, ನಾನು ನಂಬಿದ ದೇವರೇ ಶಿಕ್ಷೆ ನೀಡಲಿ. ಅದು ಹೇಗೆ ಎಂದು ನಾನು ಹೇಳುವುದಿಲ್ಲ’ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.

₹11ಸಾವಿರ ಸಂಬಳ: ಪ್ರತಿ ವಾರ ಭಜನೆಗೆ ಹೋಗುತ್ತಿದ್ದ ದೀಪಕ್‌ ರಾವ್‌ಗೆ ಹಿಂದೂ ಸಂಘಟನೆಗಳ ಪರಿಚಯವಿತ್ತು. ಹಾಗಾಗಿ ಮೊದಲು ಬಜರಂಗದಳದಲ್ಲಿ ಸಕ್ರಿಯರಾಗಿದ್ದರು. ಇದೀಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.

ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ದೀಪಕ್‌ ರಾವ್‌ ಅವರೇ ಮನೆಗೆ ಆಧಾರವಾಗಿದ್ದರು. ತಮ್ಮನಿಗೆ ಮಾತು ಬರುವುದಿಲ್ಲ. ಕುಟುಂಬದ ನಿರ್ವಹಣೆಗಾಗಿ ಮಜೀದ್‌ ಎನ್ನುವವರ ಮೊಬೈಲ್‌ ಅಂಗಡಿಯಲ್ಲಿ ಸಿಮ್‌ ಕಾರ್ಡ್‌ ಮಾರುವ ಕೆಲಸ ಮಾಡಿಕೊಂಡಿದ್ದರು.

ತಿಂಗಳಿಗೆ ₹11 ಸಾವಿರ ಸಂಬಳ ಪಡೆಯುತ್ತಿದ್ದ ದೀಪಕ್‌, ₹6 ಸಾವಿರ ಮನೆಯ ಸಾಲದ ಕಂತಿಗೆ ಕಟ್ಟುತ್ತಿದ್ದರೆ, ₹1,500 ಬೈಕ್‌ ಸಾಲದ ಕಂತಿಗೆ ಹೋಗುತ್ತಿತ್ತು. ಮನೆಯ ಖರ್ಚಿಗಾಗಿ ₹2,500 ತಾಯಿಗೆ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.