ADVERTISEMENT

ಪಾರೇಖ್‌ಗೆ ಸಿಕ್ಕಾಗಿಂತ ಕಡಿಮೆ ವೇತನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST
ಸಲೀಲ್ ಎಸ್‌. ಪಾರೇಖ್‌
ಸಲೀಲ್ ಎಸ್‌. ಪಾರೇಖ್‌   

ಬೆಂಗಳೂರು: ಐ.ಟಿ ದೈತ್ಯ ಸಂಸ್ಥೆ ಇನ್ಫೊಸಿಸ್‌ನ ಹೊಸ ಸಿಇಒ ಸಲೀಲ್‌ ಎಸ್‌. ಪಾರೇಖ್‌ ಅವರು ವರ್ಷಕ್ಕೆ ₹ 18.6 ಕೋಟಿಗಳಷ್ಟು ವೇತನ ಪಡೆಯಲಿದ್ದಾರೆ.

‘ಪ್ರಸ್ತಾವನೆ ಪ್ರಕಾರ, ಅವರ ವಾರ್ಷಿಕ ಸಂಬಳವನ್ನು (ಸ್ಥಿರ ವೇತನ) ₹ 6.5 ಕೋಟಿಗೆ ನಿಗದಿಪಡಿಸಲಾಗಿದೆ. ಪಾರೇಖ್‌ ಅವರ ಕಾರ್ಯವೈಖರಿಯು ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿದ್ದರೆ 2018–19ನೇ ಹಣಕಾಸು ವರ್ಷಾಂತ್ಯದಲ್ಲಿ ಅವರು ಕಂಪನಿಯಿಂದ ₹ 9.75 ಕೋಟಿಗಳಷ್ಟು ಉತ್ತೇಜನಾ ಮೊತ್ತ (ವೇರಿಯೇಬಲ್‌ ಪೇ) ಪಡೆಯಲಿದ್ದಾರೆ. ಇದು ₹ 12.18 ಕೋಟಿಗಳವರೆಗೂ ಏರಿಕೆಯಾಗಬಹುದು.

ಇದರ ಜತೆಗೆ, ನಿರ್ಬಂಧಿತ ಷೇರುಗಳ ರೂಪದಲ್ಲಿ ₹ 3.5 ಕೋಟಿ, ವಾರ್ಷಿಕ ಕಾರ್ಯಕ್ಷಮತೆ ಷೇರು ದೇಣಿಗೆ ರೂಪದಲ್ಲಿ ₹ 13 ಕೋಟಿ ಮತ್ತು ಒಂದು ಬಾರಿಯ ಷೇರು ದೇಣಿಗೆ ರೂಪದಲ್ಲಿ ₹ 9.75 ಕೋಟಿ ಪಡೆಯಲಿದ್ದಾರೆ.  ಒಂದು ವರ್ಷಕ್ಕೆ ಅವರ ಒಟ್ಟು ವೇತನ ₹ 42.5 ಕೋಟಿಗೆ ತಲುಪಲಿದೆ.

ADVERTISEMENT

ಇದು ಸಂಸ್ಥೆಯ ಹಿಂದಿನ ಸಿಇಒ ವಿಶಾಲ್‌ ಸಿಕ್ಕಾ ಅವರು 2016–17ನೇ ಹಣಕಾಸು ವರ್ಷದಲ್ಲಿ ಪಡೆದಿದ್ದ ವೇತನಕ್ಕಿಂತ (₹ 45.11 ಕೋಟಿ) ಕಡಿಮೆ ಇರಲಿದೆ.

ಇದೇ ಅವಧಿಯಲ್ಲಿ, ವಿಪ್ರೊ ಸಿಇಒ ಅಬಿದಾಲಿ ನಿಮೂಚವಾಲಾ ₹ 13.2 ಕೋಟಿ  ಪಡೆದಿದ್ದರು. ಟಿಸಿಎಸ್‌ ಸಿಇಒ ರಾಜೇಶ್‌ ಗೋಪಿನಾಥನ್‌ ಅವರು  ₹ 6.22 ಕೋಟಿ ‍ಪಡೆದಿದ್ದರು.

ಪಾರೇಖ್‌ ಅವರನ್ನು ಐದು ವರ್ಷಗಳ ಅವಧಿಗೆ ಈ ಹುದ್ದೆಗೆ ನೇಮಿಸಲಾಗಿದೆ. ಕಂಪನಿ ತೊರೆದ ನಂತರ ಅವರು 6 ತಿಂಗಳವರೆಗೆ ಇನ್ಫೊಸಿಸ್‌ನ ಪ್ರತಿಸ್ಪರ್ಧಿ ಸಂಸ್ಥೆಗೆ ಸೇರಿಕೊಳ್ಳಬಾರದು ಎಂದು ಒಪ್ಪಂದದಲ್ಲಿ ತಿಳಿಸಲಾಗಿದೆ.

ನಾಯಕತ್ವ ತಂಡದ ಸದಸ್ಯರಿಗೆ ಗರಿಷ್ಠ ವೇತನ ಹೆಚ್ಚಳ ಮತ್ತು ಸಂಸ್ಥೆ ತೊರೆದವರಿಗೆ ಗುತ್ತಿಗೆ ಒಪ್ಪಂದ ರದ್ದತಿ ಅನ್ವಯ ಹೆಚ್ಚು ಪರಿಹಾರ ಧನ ವಿತರಿಸಿದ  ನಿರ್ದೇಶಕ ಮಂಡಳಿಯ ನಿರ್ಧಾರವನ್ನು ಸಂಸ್ಥೆಯ ಸಹ ಸ್ಥಾಪಕರು ಪ್ರಶ್ನಿಸಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.

ಮಂಗಳವಾರ ಅಧಿಕಾರ ವಹಿಸಿಕೊಂಡಿರುವ ಪಾರೇಖ್‌ ಅವರ ನೇಮಕಾತಿಗೆ ಷೇರುದಾರರ ಸಮ್ಮತಿ ಪಡೆಯಲೂ ಸಂಸ್ಥೆ ಮುಂದಾಗಿದೆ. ಜತೆಗೆ  ಯು.ಬಿ. ಪ್ರವೀಣ್‌ ರಾವ್‌ ಅವರನ್ನು ಸಿಒಒ ಮತ್ತು ಪೂರ್ಣಾವಧಿ ನಿರ್ದೇಶಕ ಎಂದು ಅವರಿಗೆ ಹೊಸ ಹುದ್ದೆ ನೀಡಿರುವುದಕ್ಕೂ ಷೇರುದಾರರ ಸಮ್ಮತಿ ಕೋರಲಾಗಿದೆ. ಜನವರಿ 22 ರಿಂದ ಫೆಬ್ರುವರಿ 20ರವರೆಗೆ ಷೇರುದಾರರು ಮತಚಲಾಯಿಸಬಹುದಾಗಿದೆ. ಫೆಬ್ರುವರಿ 24 ಅಥವಾ ಅದಕ್ಕೂ ಮುಂಚೆ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.