ADVERTISEMENT

ಇಲಾಖಾವಾರು ಪ್ರಗತಿಯ ವಿಡಿಯೊ ನೀಡಲು ತಾಕೀತು

ಮುಖ್ಯಮಂತ್ರಿ ಸಚಿವಾಲಯದ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ   

ಬೆಂಗಳೂರು: ನಾಲ್ಕೂವರೆ ವರ್ಷಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು, ಹೊಸ ಯೋಜನೆಗಳನ್ನು ಪರಿಚಯಿಸುವ ವಿಡಿಯೊ ಸಿದ್ಧಪಡಿಸಿಕೊಡುವಂತೆ ಮುಖ್ಯಮಂತ್ರಿ ಸಚಿವಾಲಯ ಎಲ್ಲ ಇಲಾಖೆಗಳಿಗೂ ತಾಕೀತು ಮಾಡಿದೆ.

ಡಿಸೆಂಬರ್‌ 28 ರಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಕಳುಹಿಸಿದ ಟಿಪ್ಪಣಿಯಲ್ಲಿ ಸಾಧ್ಯವಾದಷ್ಟು ಬೇಗ ವಿಡಿಯೊ ಸಿದ್ಧಪಡಿಸಿ ಸಲ್ಲಿಸುವಂತೆ ಸೂಚಿಸಲಾಗಿದೆ. ಆದರೆ, ವಿಡಿಯೊ ಮಾಡುವ ಕಲೆ ಗೊತ್ತಿಲ್ಲದೆ, ಯಾವ ಲೆಕ್ಕ ಶೀರ್ಷಿಕೆಯಡಿ ಹಣ ಪಾವತಿಸಬೇಕು ಎಂಬ ಮಾಹಿತಿ ಇಲ್ಲದ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.

ಇಲಾಖೆ ಅನುಷ್ಠಾನಗೊಳಿಸಿರುವ ಅತ್ಯುತ್ತಮ ಕಾರ್ಯಕ್ರಮಗಳು, ಹೆಚ್ಚು ಜನರನ್ನು ತಲುಪಿದ ಯೋಜನೆಗಳು, ವಿಶಿಷ್ಟ ಎನಿಸುವ ಕಾಮಗಾರಿಗಳ ವಿಡಿಯೊ ಮಾಡಬೇಕು. ಅವೆಲ್ಲವನ್ನೂ ಕ್ರೋಡೀಕರಿಸಿ ಸರ್ಕಾರದ ಸಾಧನೆಗಳು ಕಣ್ಣಿಗೆ ಕಟ್ಟುವಂತೆ 15 ನಿಮಿಷದಲ್ಲಿ ವೀಕ್ಷಿಸಲು ಸಾಧ್ಯವಾಗುವಂತೆ ಸಿ.ಡಿಯಲ್ಲಿ ಹಾಕಿ ಕೊಡಬೇಕು ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

ADVERTISEMENT

ಅಧಿಕಾರಿಗಳಿಗೆ ತಲೆಬಿಸಿ: ‘ಇಲ್ಲಿಯವರೆಗೆ ಬಿಡುಗಡೆಯಾದ ಅನುದಾನ ಮತ್ತು ಖರ್ಚಾದ ಮೊತ್ತದ ವಿವರದ ಜತೆಗೆ, ಪ್ರಗತಿಯ ವರದಿ ಕೇಳುತ್ತಿದ್ದರು. ಇದೇ ಮೊದಲ ಬಾರಿಗೆ ವಿಡಿಯೊ ಸಿದ್ಧಪಡಿಸಿಕೊಡುವಂತೆ ಸೂಚಿಸಲಾಗಿದೆ. ಸಿದ್ಧಪಡಿಸಿಕೊಡುವುದು ಹೇಗೆ ಎಂಬುದು ಗೊತ್ತಿಲ್ಲದೆ ಇಕ್ಕಟ್ಟಿಗೆ ಸಿಲುಕಿದ್ದೇವೆ’ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ವಿಡಿಯೊ ಚಿತ್ರೀಕರಣ ಮಾಡುವುದಕ್ಕೆ ನಮ್ಮ ಇಲಾಖೆ ಮಾತ್ರವಲ್ಲ, ಯಾವುದೇ ಇಲಾಖೆಯಲ್ಲೂ ಪ್ರತ್ಯೇಕ ಸಿಬ್ಬಂದಿ ಇಲ್ಲ. ಅಲ್ಲದೆ, ರಾಜ್ಯದ ವಿವಿಧ ಭಾಗಗಳಲ್ಲಿ ಕಾಮಗಾರಿ, ಹೊಸ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಅವೆಲ್ಲವುಗಳನ್ನೂ ಚಿತ್ರೀಕರಿಸಿ, ಸಂಕಲನಗೊಳಿಸಿ ಸಿದ್ಧಪಡಿಸಿಕೊಡಬೇಕಾದರೆ ಈ ಕ್ಷೇತ್ರದಲ್ಲಿ ಪರಿಣತಿ ಇರುವ ಖಾಸಗಿಯವರ ನೆರವು ಪಡೆಯಬೇಕು. ಸಿ.ಡಿ ತಯಾರಿಸಿಕೊಡಬೇಕಾದರೆ ಖಾಸಗಿ ಸಂಸ್ಥೆಗಳು ಕನಿಷ್ಠ ₹2 ಲಕ್ಷದಿಂದ ₹3  ಲಕ್ಷ ಶುಲ್ಕ ಪಡೆಯುತ್ತವೆ. ಇಷ್ಟು ಹಣವನ್ನು ಯಾವ ಲೆಕ್ಕ ಶೀರ್ಷಿಕೆಯಡಿ ಖರ್ಚು ಮಾಡಬೇಕು ಎಂಬ ಸೂಚನೆ ನೀಡಿಲ್ಲ’ ಎಂದು ಅವರು ತಮ್ಮ ಸಂಕಷ್ಟ ತೋಡಿಕೊಂಡರು.

ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೆ ಬಿಡುಗಡೆಯಾದ ಅನುದಾನ, ಖರ್ಚಾಗಿರುವ ಮೊತ್ತ, ಇಲಾಖೆ ರೂಪಿಸಿರುವ ವಿಶಿಷ್ಟ ಯೋಜನೆಗಳು, ಉಳಿಕೆಯಾಗಿರುವ ಅನುದಾನ ಎಷ್ಟು ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

ಚುನಾವಣೆ ದೃಷ್ಟಿ: ‘ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಸಾಮಗ್ರಿ ಸಿದ್ಧಪಡಿಸುವ ಜವಾಬ್ದಾರಿಯನ್ನು ಹೊರ ರಾಜ್ಯಗಳ ಕಂಪನಿಗಳಿಗೆ ನೀಡಲಾಗಿದೆ. ಇಲಾಖಾವಾರು ವಿಡಿಯೊಗಳನ್ನು ಬಳಸಿಕೊಂಡು ಕಾಂಗ್ರೆಸ್‌ ಸರ್ಕಾರದ ಸಾಧನೆ ವಿವರಿಸುವ ಸಾಕ್ಷ್ಯ ಚಿತ್ರ, ದೃಶ್ಯ ಮಾಧ್ಯಮಗಳಿಗೆ ಜಾಹೀರಾತು ತಯಾರಿಸಲು ಕಂಪನಿಗಳು ಸಿದ್ಧತೆ ನಡೆಸಿವೆ. ಅದೇ ಕಾರಣಕ್ಕೆ ಎಲ್ಲ ಇಲಾಖೆಗಳಿಂದ ವಿಡಿಯೊ ಚಿತ್ರೀಕರಿಸಿ ಸಿ.ಡಿ ಸಲ್ಲಿಸಲು ಸೂಚಿಸಲಾಗಿದೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

‘ಬಜೆಟ್‌ ಸಿದ್ಧಪಡಿಸಲು ಬಿಡುಗಡೆ ಮಾಡಿದ ಮತ್ತು ಖರ್ಚಾದ ಅನುದಾನದ ಬಗ್ಗೆ ವಿವರ ಕೇಳಲಾಗಿದೆ. ಯಾವ ಇಲಾಖೆಯಲ್ಲಿ ಎಷ್ಟು ಹಣ ಉಳಿದಿದೆ, ಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು ಎಂಬ ಬಗ್ಗೆ ತಿಳಿಯಲು ಈ ಮಾಹಿತಿ ನೀಡುವಂತೆ ಸೂಚಿಸಲಾಗಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.