ADVERTISEMENT

‘ಆರೋಪಿಗಳ ಕಾರಿನ ನಂಬರ್ ನೀಡಿದವರು ಮುಸ್ಲಿಮರು’

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST
ದೀಪಕ್‌ ರಾವ್‌
ದೀಪಕ್‌ ರಾವ್‌   

ಬೆಂಗಳೂರು: ‘ದೀಪಕ್ ರಾವ್ ಮೇಲೆ ಹಲ್ಲೆ ನಡೆಯುವಾಗ ಅಲ್ಲಿದ್ದ ಸ್ಥಳೀಯ ಮುಸ್ಲಿಮರು ಆತನನ್ನು ರಕ್ಷಿಸಲು ಮುಂದಾಗಿದ್ದರು, ಆದರೆ ಅಷ್ಟರಲ್ಲಿ ದೀಪಕ್ ಮೃತಪಟ್ಟಿದ್ದರು’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಬರೆದುಕೊಂಡಿದ್ದಾರೆ. ಆದರೆ ಯಾವ ಮಾಧ್ಯಮಗಳೂ ಈ ಮಾಹಿತಿಯನ್ನು ಪ್ರಕಟಿಸುತ್ತಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಪ್ರಕಟವಾಗಿರುವ ಅಂತಹ ಒಂದು ಬರಹ ವೈರಲ್ ಆಗಿದ್ದು, ಹಲವರು ಅದನ್ನು ಹಂಚಿಕೊಂಡಿದ್ದಾರೆ.

‘ಸ್ಥಳೀಯ ಮುಸ್ಲಿಮರು ಹಲ್ಲೆ ನಡೆದ ಜಾಗಕ್ಕೆ ತಲುಪುವಷ್ಟರಲ್ಲಿ ಆರೋಪಿಗಳು ತಮ್ಮ ಕಾರು ಹತ್ತಿ ಪರಾರಿಯಾದರು. ಇದರ ಮಧ್ಯೆಯೇ ಆ ಕಾರಿನ ಮಾದರಿ, ಬಣ್ಣ ಮತ್ತು ನೋಂದಣಿ ಸಂಖ್ಯೆ ಹಾಗೂ ಅದು ಹೋದ ದಿಕ್ಕಿನ ಬಗ್ಗೆ ಆ ಮುಸ್ಲಿಮರೇ ಪೊಲೀಸರಿಗೆ ಮಾಹಿತಿ ನೀಡಿದರು.  ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಲು ಇದರಿಂದ ಸಾಧ್ಯವಾಯಿತು’ ಎಂದು ಆ ಫೇಸ್‌ಬುಕ್‌ ಬರಹದಲ್ಲಿ ವಿವರಿಸಲಾಗಿದೆ.

ADVERTISEMENT

ಕೊಂದವರು ನಾಶವಾಗಲಿ: ‘ದೀಪಕ್ ಒಳ್ಳೆಯ ಹುಡುಗನಾಗಿದ್ದ. ಆತನ ಸಾವನ್ನು ಊಹಿಸಲು ಸಾಧ್ಯವಿಲ್ಲ. ಆತನನ್ನು ಕೊಂದವರು ನಾಶವಾಗಿ ಹೋಗಲಿ’ ಎಂದು ದೀಪಕ್ ಕೆಲಸ ಮಾಡುತ್ತಿದ್ದ ಮೊಬೈಲ್ ಅಂಗಡಿ ಮಾಲೀಕ ಅಬ್ದುಲ್ ಮಜೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಮ್ಮ ನಡುವೆ ಯಾವುದೇ ಜಾತಿ ಭೇದಬಾವ ಇರಲಿಲ್ಲ. ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ದೀಪಕ್‌, ನಮ್ಮ ನಡುವೆ ಯಾವತ್ತೂ ಧರ್ಮ, ಆಚಾರ, ವಿಚಾರ ಅಡ್ಡ ಬರಲಿಲ್ಲ. ಸಂಸ್ಕಾರ, ಸಂಸ್ಕೃತಿ ಅಡ್ಡಿಯಾಗಲಿಲ್ಲ. ಮಾನವೀಯತೆಯಿಂದ ನಾವು ಕೆಲಸ ಮಾಡುತ್ತಿದ್ದೆವು. 7 ವರ್ಷದಲ್ಲಿ ಒಂದು ದಿನವೂ ನಾನು ಮುಸ್ಲಿಂ, ನೀನು ಹಿಂದೂ ಎಂದೂ ಭೇದ ಮಾಡಿರಲಿಲ್ಲ’ ಎಂದು ಸ್ಥಳೀಯ ಸುದ್ದಿ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.