ADVERTISEMENT

‘ಸುಪ್ರೀಂ’ ಮೊರೆ ಹೋದ ಕಲಬುರ್ಗಿ ಕುಟುಂಬ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 19:30 IST
Last Updated 6 ಜನವರಿ 2018, 19:30 IST
ಡಾ. ಎಂ.ಎಂ. ಕಲಬುರ್ಗಿ
ಡಾ. ಎಂ.ಎಂ. ಕಲಬುರ್ಗಿ   

ಧಾರವಾಡ: ವಿಚಾರವಾದಿ ಡಾ. ಎಂ.ಎಂ.ಕಲಬುರ್ಗಿ ಹತ್ಯೆಯ ತನಿಖೆ ವಿಳಂಬವಾಗುತ್ತಿದ್ದು ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಲಬುರ್ಗಿ ಅವರ ಪತ್ನಿ ಉಮಾದೇವಿ ಹಾಗೂ ಮಕ್ಕಳು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.

ಕ್ರಿಸ್‌ಮಸ್‌ ರಜೆಗೂ ಮೊದಲು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.

2015ರ ಆಗಸ್ಟ್‌ 30ರಂದು ಅಪರಿಚಿತರ ಗುಂಡಿಗೆ ಕಲಬುರ್ಗಿ ಬಲಿಯಾಗಿದ್ದರು. ರಾಜ್ಯ ಸರ್ಕಾರ, ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಆದರೆ ಕೊಲೆಗಾರರ ಸುಳಿವು ಈವರೆಗೂ ಲಭ್ಯವಾಗದೇ ಇರುವುದರಿಂದ ಬೇಸರಗೊಂಡಿರುವ ಕುಟುಂಬ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ನ್ಯಾಯಾಲಯವನ್ನು ಮನವಿ ಮಾಡಿಕೊಂಡಿದೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಉಮಾದೇವಿ, ‘ಸತತ ಎರಡು ವರ್ಷಗಳ ಕಾಲ ರಾಜ್ಯ ಸರ್ಕಾರದ ಮೇಲೆ ತೀವ್ರ ನಂಬಿಕೆ ಇಟ್ಟು ಕಾದೆವು. ಆದರೆ ಇಂದು, ನಾಳೆ ಎನ್ನುತ್ತಲೇ ದಿನಗಳು ಕಳೆದು ಹೋದವು. ಇಂದಿಗೂ ನಾವು ತನಿಖೆಯ ಫಲಿತಾಂಶಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದೇವೆ’ ಎಂದರು.

‘ಕಲಬುರ್ಗಿ ಅವರ ಜನ್ಮದಿನವಾದ ನ. 28ರ ನಂತರ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮತ್ತೊಮ್ಮೆ ಮನವಿ ಮಾಡಿಕೊಂಡೆ. ಅವರು ತನಿಖೆ ನಡೆಯುತ್ತಿದೆ. ನಿಮಗೆ ತಿಳಿಸುತ್ತೇವೆ ಎಂದಷ್ಟೇ ಹೇಳಿದರು. ಕಾಯಲು ಒಂದು ಮಿತಿ ಎಂಬುದು ಇರುತ್ತದೆ. ಹೀಗಾಗಿ ಮಕ್ಕಳೊಂದಿಗೆ ಚರ್ಚಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗಲು ನಿರ್ಧರಿಸಲಾಯಿತು’ ಎಂದು ತಿಳಿಸಿದರು.

ಅವರ ಪುತ್ರ ಶ್ರೀವಿಜಯ ಕಲಬುರ್ಗಿ ಮಾತನಾಡಿ, ‘ಇಡೀ ಕುಟುಂಬದವರು ನಿರ್ಧರಿಸಿಯೇ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಬರುವ ವಾರದಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ನ್ಯಾಯಾಲಯದ ಮೊರೆ ಹೋಗಿರುವುದರಿಂದ ಈ ಕುರಿತಂತೆ ಹೆಚ್ಚಿನ ಏನನ್ನೂ ಹೇಳುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.