ADVERTISEMENT

ಬಗರ್‌ಹುಕುಂ ವಜಾಗೊಂಡ ಅರ್ಜಿಗಳ ಪುನರ್‌ಪರಿಶೀಲನೆಗೆ ಕ್ರಮ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 19:38 IST
Last Updated 6 ಜನವರಿ 2018, 19:38 IST

ತೀರ್ಥಹಳ್ಳಿ: ಬಗರ್‌ಹುಕುಂ ಸಾಗುವಳಿಗೆ ಸಂಬಂಧಿಸಿದಂತೆ ವಜಾಗೊಂಡ ಅರ್ಜಿಗಳ ಪುನರ್‌ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗುವುದು. ಗೋಮಾಳ, ಸೊಪ್ಪಿನಬೆಟ್ಟ, ಇತರೆ ಕಂದಾಯ ಪ್ರದೇಶದ ಭೂಮಿ ಕುರಿತು ಉದ್ಭವಿಸಿರುವ ಕಾನೂನು ತೊಡಕನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶನಿವಾರ ತೀರ್ಥಹಳ್ಳಿಗೆ ಬಂದಿದ್ದ ಅವರು ಹೆಲಿಪ್ಯಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ಬಹಳ ದಿನಗಳಿಂದ ಬಗರ್‌ಹುಕುಂ ಸಾಗುವಳಿ ಸಕ್ರಮಕ್ಕೆ ಸಂಬಂಧಿಸಿದಂತೆ ಸಮಸ್ಯೆ ಉಂಟಾಗಿದೆ. ಅಕ್ರಮ– ಸಕ್ರಮ ನಿವೇಶನ ಹಕ್ಕುಪತ್ರ ವಿತರಿಸಲು ವಿಶೇಷ ಆದ್ಯತೆ ನೀಡಲಾಗಿದೆ. ಸರ್ಕಾರಿ ಭೂ ಮಂಜೂರಾತಿ ಅರ್ಜಿಗಳ ವಜಾ ಆಗದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡಲಿ. ರಾಜ್ಯದಲ್ಲಿನ ರೈತರ ₹ 42 ಸಾವಿರ ಕೋಟಿ ಅಲ್ಪಾವಧಿ ಸಾಲ ಮನ್ನಾ ಮಾಡಲು ನರೇಂದ್ರ ಮೋದಿಅವರಿಗೆ ಏನು ತೊಂದರೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಅಂದ್ರೆ ಮುಗಿದುಬಿಡ್ತಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ADVERTISEMENT

‘ಕರಾವಳಿ ಭಾಗದಲ್ಲಿ ಕೋಮು ಘರ್ಷಣೆಗೆ ಬಿಜೆಪಿ ನೇರ ಕಾರಣವಾಗಿದ್ದು ಅಶಾಂತಿಯನ್ನು ಸೃಷ್ಟಿಸುತ್ತಿದೆ. ಅಧಿಕಾರದ ಆಸೆಗಾಗಿ ಬಿಜೆಪಿ ಏನು ಬೇಕಾದರೂ ಮಾಡುತ್ತದೆ. ಅವರದ್ದು ಒಂದು ರೀತಿ ತೋಳ, ಕುರಿ ಕಥೆ ಇದ್ದಂತೆ. ಅವರ ಕೈವಾಡವಿರುವ ಶಂಕೆಯಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.