ADVERTISEMENT

ಪ್ರತಿ ಕೊಲೆಗೂ ರಾಜಕೀಯ ಬಣ್ಣ

ಚಿತ್ರದುರ್ಗದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ವಿಷಾದ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST
ಪ್ರತಿ ಕೊಲೆಗೂ ರಾಜಕೀಯ ಬಣ್ಣ
ಪ್ರತಿ ಕೊಲೆಗೂ ರಾಜಕೀಯ ಬಣ್ಣ   

ಚಿತ್ರದುರ್ಗ: ರಾಜ್ಯದಲ್ಲಿ ನಡೆದ ಪ್ರತಿ ಕೊಲೆಗೂ ರಾಜಕೀಯ ಬಣ್ಣ ಬೆರೆಸಿ ಕೆಲವರು ಅಪಪ್ರಚಾರ ಮಾಡುತ್ತಿರುವುದು ಎಷ್ಟು ಸರಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ಇಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರಕ್ಕೆ ಅಲ್ಲಿನ ರಾಜಕೀಯ ಪಕ್ಷಗಳು ಮತ್ತು ಮುಖಂಡರು ಕಾರಣ ಎಂದು ಆರೋಪಿಸಿದರು.

ರಾಜ್ಯದಲ್ಲಿ ಯಾವುದಾದರೂ ಗಂಭೀರ ಹಲ್ಲೆ ನಡೆದು ಮೃತಪಟ್ಟ ವ್ಯಕ್ತಿ ಹಿಂದೂ ಆಗಿದ್ದರೆ, ಆತ ತಮ್ಮ ಪಕ್ಷದ ಕಾರ್ಯಕರ್ತ; ಬಜರಂಗ
ದಳಕ್ಕೆ ಸೇರಿದವರು ಎಂದು ಚುನಾವಣಾ ದೃಷ್ಟಿ ಇಟ್ಟುಕೊಂಡು ಬಿಜೆಪಿ ಮುಖಂಡರು ಹೇಳುತ್ತಾ ಕೋಮು ಸೌಹಾರ್ದ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ರಾಜ್ಯದ 30 ಜಿಲ್ಲೆಗಳ ಪೈಕಿ ಕರಾವಳಿಯಲ್ಲಿ ಮಾತ್ರ ಗಲಭೆಗಳು ನಡೆಯುತ್ತಿವೆ. ಇಂತಹ ವಿಕೃತ ಮನಸ್ಸಿನಿಂದ ಹೊರ ಬಂದಾಗ ಮಾತ್ರ ರಾಜ್ಯದಲ್ಲಿ ಎಲ್ಲರೂ ಸೌಹಾರ್ದದಿಂದ ಬಾಳಲು ಸಾಧ್ಯ. ಆದರೆ, ಪಿಎಫ್ಐ, ಬಜರಂಗದಳ, ಶ್ರೀರಾಮ ಸೇನೆ ಹಾಗೂ ಇತರೆ ಸಂಘಟನೆಗಳು ಸೌಹಾರ್ದಯುತವಾಗಿ ಇಲ್ಲ ಎಂದು ವಿಷಾದಿಸಿದರು.

ಯಾವ ಕಾರಣಕ್ಕೆ ಬಶೀರ್ ಕೊಲೆ ಆಗಿದೆ ಎಂಬ ಬಗ್ಗೆ ತನಿಖೆ ಪೂರ್ಣಗೊಂಡ ನಂತರ ಮಾಹಿತಿ ಲಭ್ಯವಾಗಲಿದೆ ಎಂದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಲ್ಲಿ ರಾಜ್ಯ ಸರ್ಕಾರವಾಗಲಿ, ಪೊಲೀಸ್ ಇಲಾಖೆಯಾಗಲಿ ವಿಫಲವಾಗಿಲ್ಲ ಎಂದು ಹೇಳಿದರು.

‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಶೇ 6ರಷ್ಟು ಅಪರಾಧ ಕೃತ್ಯಗಳು ನಡೆದಿತ್ತು. ನಮ್ಮ ಸರ್ಕಾರದ ಆತಳಿತದ ಅವಧಿಯಲ್ಲಿ ಶೇ 5ರಷ್ಟು ನಡೆದಿದೆ. ಯಾವುದೇ ಪಕ್ಷವಾಗಲಿ ಹಿಂದೂ, ಮುಸ್ಲಿಂ ಎಂಬ ಕೋಮು ಬಣ್ಣ ಹಚ್ಚಬಾರದು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.