ADVERTISEMENT

ಅನುಮತಿ ನಿರಾಕರಣೆ ಧಿಕ್ಕರಿಸಿ ಸಮಾವೇಶ!

ಬಬಲೇಶ್ವರದಲ್ಲಿ ನಾಳೆ ವೀರಶೈವ–ಲಿಂಗಾಯತ ಸಮನ್ವಯದ ಜನಜಾಗೃತಿ ಸಭೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST

ವಿಜಯಪುರ: ವಿಜಯಪುರ ತಾಲ್ಲೂಕು ಆಡಳಿತ ಅನುಮತಿ ನಿರಾಕರಿಸಿದ್ದರೂ, ಇದೇ 9ರಂದು ಬಬಲೇಶ್ವರದಲ್ಲಿ ವೀರಶೈವ ಲಿಂಗಾಯತ ಸಮನ್ವಯದ ಜನ ಜಾಗೃತಿ ಸಮಾವೇಶ ನಡೆಸಲು ಅಲ್ಲಿನ ಬೃಹನ್ಮಠ ಹಾಗೂ ಕೆಲ ಗ್ರಾಮಸ್ಥರು ಸಜ್ಜಾಗಿದ್ದಾರೆ.

‘ಸಮಾವೇಶಕ್ಕೆ ಭರದ ಸಿದ್ಧತೆ ನಡೆದಿದೆ. ಸುತ್ತಲಿನ 40ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಹಾಗೂ ನಾಡಿನ ಹಲವೆಡೆ ಈ ಬಗ್ಗೆ ಪ್ರಚಾರ ನಡೆಸಲಾಗಿದೆ. ಪೂರ್ವಭಾವಿ ಸಭೆಗಳು ನಡೆದಿವೆ. ವಿವಿಧ ಮಠಾಧೀಶರಿಗೂ ಆಹ್ವಾನ ನೀಡಲಾಗಿದೆ. ನಿಗದಿತ ದಿನ ಹಾನಗಲ್ಲ ಕುಮಾರ ಶಿವಯೋಗಿಗಳ ಜಯಂತಿ ಹಾಗೂ ಜನಜಾಗೃತಿ ಸಭೆ ನಡೆಸಿಯೇ ಸಿದ್ಧ’ ಎಂದು ಬೃಹನ್ಮಠದ ಮಹಾದೇವ ಶಿವಾಚಾರ್ಯರು ತಿಳಿಸಿದರು.

‘ಪ್ರತ್ಯೇಕ ಧರ್ಮ ಎಂಬ ತಿಕ್ಕಾಟ ಆರಂಭಗೊಂಡ ದಿನದಿಂದಲೂ ನಾವು ವೀರಶೈವ ಲಿಂಗಾಯತ ಪರ ನಿಂತಿದ್ದೇವೆ. ಈ ನಿಟ್ಟಿನಲ್ಲಿ ಬೆಂಬಲ ವ್ಯಕ್ತಪಡಿಸಿ, ಸಮಾಜ ಸಂಘಟಿಸಿದ್ದೇವೆ. ತಿಂಗಳಿನಿಂದ ಸಿದ್ಧತೆ ನಡೆಸಿದ್ದು, ನಮ್ಮ ಮಠದ ಆವರಣದಲ್ಲಿಯೇ ಕಾಶಿ, ಶ್ರೀಶೈಲ, ಉಜ್ಜಯಿನಿ, ರಂಭಾಪುರಿ ಪೀಠದ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶ ಆಯೋಜಿಸಿದ್ದೇವೆ’ಎಂದರು.

ADVERTISEMENT

‘ಆದರೆ, ಲಿಂಗಾಯತ ಚಳವಳಿಯ ಮುಂಚೂಣಿಯಲ್ಲಿರುವ ಸಚಿವ ಎಂ.ಬಿ.ಪಾಟೀಲರಿಗೆ ಇದನ್ನು ಸಹಿಸಲಾಗುತ್ತಿಲ್ಲ. ಸಮಾವೇಶ ನಡೆಯಲೇಬಾರದು ಎಂಬ ಕಾರಣಕ್ಕೆ ಅಧಿಕಾರಿಗಳನ್ನು ಬಳಸಿಕೊಂಡು ಈ ಆಟ ಹೂಡಿದ್ದಾರೆ. ಇದಕ್ಕೆಲ್ಲ ಬಗ್ಗುವವರು ನಾವಲ್ಲ. ನಾವೆಂದೂ ಲಿಂಗಾಯತ ಪ್ರತ್ಯೇಕ ಧರ್ಮದ ಚಳವಳಿಗೆ ಅಡ್ಡಿಪ
ಡಿಸಿಲ್ಲ. ಆದರೂ ನಮ್ಮ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ. ಆದರೆ, ನಾವು ಸಮಾವೇಶ ನಡೆಸಿಯೇ ತೀರುತ್ತೇವೆ’ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

ಅನುಮತಿ ನಿರಾಕರಣೆಗೆ ಕಾರಣಗಳು:

ಮಠದ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಪೊಲೀಸರು ಜ. 5ರಂದು ಅನುಮತಿ ನೀಡಿದ್ದರು. ಮರುದಿನ ಪರಿಷ್ಕೃತ ವರದಿ ನೀಡಿದ್ದರಿಂದ, ವಿಜಯಪುರ ತಾಲ್ಲೂಕು ಆಡಳಿತ ಅನುಮತಿಯನ್ನು ಹಿಂಪಡೆದಿರುವುದಾಗಿ ಸ್ವಾಮೀಜಿಗೆ ಪತ್ರ ಮುಖೇನ ತಿಳಿಸಲಾಗಿದೆ.

‘ಬಬಲೇಶ್ವರದಲ್ಲಿ ಜ 9ರಂದು, ರಾಜ್ಯ ಸರ್ಕಾರದ ವತಿಯಿಂದ ಅಂಬೇಡ್ಕರ್‌ ಭವನ, ಪ್ರತಿಮೆ ಪ್ರತಿಷ್ಠಾಪನೆ, ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚನ್ನಮ್ಮ, ಬಸವೇಶ್ವರ ಹಾಗೂ ಗುರುಪಾದೇಶ್ವರ ಮಠದ ಶಾಂತವೀರ ಸ್ವಾಮೀಜಿ ಮೂರ್ತಿಗಳ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಇದರ ಅಂಗವಾಗಿ ಗ್ರಾಮದಲ್ಲಿ ಮೆರವಣಿಗೆ, ಸಾರ್ವಜನಿಕ ಸಭೆ ಜರುಗಲಿದೆ.

ಬೃಹನ್ಮಠ ಆಯೋಜಿಸಿರುವ ಕಾರ್ಯಕ್ರಮ ಹಾಗೂ ಸರ್ಕಾರಿ ಕಾರ್ಯಕ್ರಮ ನಡೆಯುವ ಸ್ಥಳ ಅಕ್ಕಪಕ್ಕದಲ್ಲೇ ಇದ್ದು, ಹೆಚ್ಚಿನ ಜನದಟ್ಟಣೆ ಆಗುವ ಸಾಧ್ಯತೆ ಇದೆ. ದಲಿತ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ,ಕೊಲೆ ಖಂಡಿಸಿ, ಇದೇ ದಿನ ವಿವಿಧ ಸಂಘಟನೆಗಳು ‘ವಿಜಯಪುರ ಚಲೊ’ ಚಳವಳಿಗೆ ಮುಂದಾಗಿವೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಾರದು ಎಂಬ ಕಾರಣದಿಂದ, ಡಿವೈಎಸ್‌ಪಿ ವರದಿ ಆಧರಿಸಿ ಅನುಮತಿ ನಿರಾಕರಿಸಲಾಗಿದೆ’ ಎಂದು ತಿಳಿಸಲಾಗಿದೆ.

***

ನಾವು ಯಾವುದೇ ರಾಜಕೀಯ ಸಮಾರಂಭ ಆಯೋಜಿಸಿಲ್ಲ. ನಮ್ಮದು ಪೂರ್ವ ನಿಗದಿತ ಧಾರ್ಮಿಕ ಸಮಾರಂಭ. ತಾಲ್ಲೂಕು ಆಡಳಿತ ಅನುಮತಿ ನಿರಾಕರಿಸಿದೆ. ಇದಕ್ಕೆ ಸೊಪ್ಪು ಹಾಕುವುದಿಲ್ಲ.
ಡಾ.ಮಹಾದೇವ ಶಿವಾಚಾರ್ಯರು, ಬಬಲೇಶ್ವರ ಬೃಹನ್ಮಠ

***

ಭದ್ರತಾ ಕಾರಣದಿಂದ ಅನುಮತಿ ನಿರಾಕರಿಸಲಾಗಿದೆ. ಪೊಲೀಸರು ಪರಿಷ್ಕೃತ ವರದಿ ಸಲ್ಲಿಸಿದ ಬಳಿಕ ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿದ್ದೇವೆ. ಇದರಲ್ಲಿ ಯಾರ ಒತ್ತಡವೂ ಇಲ್ಲ
ಎಂ.ಎನ್‌. ಬಳಿಗಾರ, ವಿಜಯಪುರ ತಹಶೀಲ್ದಾರ್

***

ಅನುಮತಿ ನೀಡಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಧಾರ್ಮಿಕ ಸಭೆ ನಡೆಸಲು ಅನುಮತಿ ನೀಡುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗುವುದು
ಎಂ.ಬಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.