ADVERTISEMENT

‘ರೌಡಿಗಳು ಬೀದಿಗೆ ಬಂದು ಮಾತನಾಡಿದಂತಿದೆ’

ಬಿಜೆಪಿ ಪ್ರತಿಭಟನೆಗೆ ದಿನೇಶ್‌ ಗುಂಡೂರಾವ್‌ ಗೇಲಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST

ಬೆಂಗಳೂರು: ‘ಸುರತ್ಕಲ್‌ನಲ್ಲಿ ದೀಪಕ್‌ ರಾವ್ ಹತ್ಯೆ ಖಂಡಿಸಿ ಬಿಜೆಪಿ ನಾಯಕರು ನಡೆಸಿದ ಪ್ರತಿಭಟನೆ, ರೌಡಿಗಳು ಬೀದಿಗೆ ಬಂದು ಕಾನೂನು ಸುವ್ಯವಸ್ಥೆ ಕುರಿತು ಮಾತನಾಡಿದಂತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಗೇಲಿ ಮಾಡಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಸೋಮವಾರ ಮಾತನಾಡಿದ ಅವರು, ‘ದೀಪಕ್ ಕೊಲೆ ಪ್ರಕರಣವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ’ ಎಂದು ದೂರಿದರು.

‘ಹಲವು ಹಿಂದೂಗಳ ಹತ್ಯೆ ಹಿಂದೆ ಸಂಘ ಪರಿವಾರದವರೇ ಇದ್ದಾರೆ. ಹರೀಶ್ ಪೂಜಾರಿ ಕೊಲೆ ಸಂಘ ಪರಿವಾರದವರಿಂದ ಆಗಿದೆ. ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ್ ಪ್ರಕರಣದಲ್ಲಿ ಬಜರಂಗದಳದ ಕಾರ್ಯಕರ್ತ ಮೊದಲ ಆರೋಪಿ’ ಎಂದರು.

ADVERTISEMENT

‘ಚುನಾವಣೆಯನ್ನು ವಿಷಯಗಳ ಮೇಲೆ ಎದುರಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕೋಮುಗಲಭೆ ಸೃಷ್ಟಿಸಿ ಲಾಭ ಪಡೆಯಲು ಆ ಪಕ್ಷ ಮುಂದಾಗಿದೆ’ ಎಂದೂ ಆರೋಪಿಸಿದರು.‌

‘ಬಿಜೆಪಿ ನಾಯಕರಂತೆ ಕಾಂಗ್ರೆಸ್ಸಿಗರಿಗೆ ಹಲವು ನಾಲಿಗೆಗಳಿಲ್ಲ. ನಮಗೆ ಒಂದೇ ನಾಲಿಗೆ. ಸುಳ್ಳು ಹೇಳಿಕೊಂಡು ನಾವು ಓಡಾಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.