ADVERTISEMENT

ಆಡಳಿತ ಕೆಟ್ಟು ಹೋಗಿದೆ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST

ಬೆಂಗಳೂರು: ‘ರಾಜ್ಯದಲ್ಲಿ ಆಡಳಿತ ಕೆಟ್ಟು ಹೋಗಿದೆ. ಇಂತಹ ಆಡಳಿತವನ್ನು ನಾವು ಎಂದೂ ನೋಡಿಯೇ ಇರಲಿಲ್ಲ. ಸರ್ಕಾರವು ಎರಡು ಗಂಟೆಗೆ ಒಬ್ಬ ಅಧಿಕಾರಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡುತ್ತಿದೆ. ವರ್ಗ ಮಾಡಿದ ಮೇಲೆ ಯಾವುದೇ ಹುದ್ದೆ ತೋರಿಸುವುದೇ ಇಲ್ಲ. ಅಧಿಕಾರಿಗಳು ಕೆಲಸ ಮಾಡದೇ ಸಂಬಳ ಪಡೆಯುತ್ತಿದ್ದಾರೆ’ ಎಂದು ಹೈಕೋರ್ಟ್ ಕಿಡಿ ಕಾರಿದೆ.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಒಬ್ಬರನ್ನು ತಿಂಗಳ ಅವಧಿಯಲ್ಲಿ 3 ಬಾರಿ ವರ್ಗಾವಣೆ ಮಾಡಿ, ನಂತರ ಯಾವುದೇ ಹುದ್ದೆ ತೋರಿಸದ ಪ್ರಕರಣವನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರ ವಿವರಣೆಗೆ ತೃಪ್ತಿಯಾಗದ ನ್ಯಾಯಮೂರ್ತಿ ರಮೇಶ್‌, ‘ಸರ್ಕಾರಿ ಅಧಿಕಾರಿಗಳು ಕೆಲಸ ಮಾಡದೆ ವ್ಯಾಜ್ಯ ಗಳಲ್ಲಿ ಮುಳುಗಿದ್ದಾರೆ. ಪ್ರಭಾವಿಗಳ ಶಿಫಾರಸು  ಪತ್ರ ತಂದರೆ ವರ್ಗಾವಣೆ ನಡೆಯುತ್ತವೆ. ಕಾನೂನು ಪಾಲನೆ ಇಲ್ಲವಾಗಿದೆ’ ಎಂದು ಕೆಂಡ ಕಾರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.