ADVERTISEMENT

ಕೇಂದ್ರ ಕೊಟ್ಟ ಹಣವನ್ನು ನುಂಗಿದ ಕಾಂಗ್ರೆಸ್: ಅಮಿತ್ ಷಾ ಆರೋಪ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 9:41 IST
Last Updated 10 ಜನವರಿ 2018, 9:41 IST
ಅಮಿತ್ ಷಾ
ಅಮಿತ್ ಷಾ   

ಹೊಳಲ್ಕೆರೆ: ಕರ್ನಾಟಕದ ವಿವಿಧ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ ಒಟ್ಟು ₹3 ಲಕ್ಷ ಕೋಟಿ  ಕೊಟ್ಟಿದೆ. ಅದರಲ್ಲಿ ಎಷ್ಟು ಹಣ ಹಳ್ಳಿಗಳಿಗೆ ತಲುಪಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪ್ರಶ್ನಿಸಿದರು.

ಬುಧವಾರ ಇಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ರಾಜ್ಯಕ್ಕೆ ಏನು ಕೊಟ್ಟಿದೆ ಎಂದು ಲೆಕ್ಕ ಕೇಳಿದ್ದರು. ಈಗ ಲೆಕ್ಕ ಕೊಡುತ್ತೇನೆ ಎನ್ನುತ್ತಲೇ ಪುಂಖಾನುಪುಂಖವಾಗಿ ಪ್ರಶ್ನೆಗಳನ್ನು ಕೇಳಿದರು.

ADVERTISEMENT

ಉಜ್ವಲ ಗ್ಯಾಸ್ ಯೋಜನೆ, ಮುದ್ರಾ ಯೋಜನೆ, ಸ್ವಚ್ಛ ಭಾರತ ಅಭಿಯಾನ ಮೊದಲಾದ ಯೋಜನೆಗಳಿಗೆ ಕೇಂದ್ರ ಸರ್ಕಾರ ಕೊಟ್ಟ ಹಣದ ಬಹುಪಾಲನ್ನು ಕಾಂಗ್ರೆಸಿಗರು ನುಂಗಿದ್ದಾರೆ ಎಂದು ಆರೋಪಿಸಿದರು.

‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ₹2,19, 506 ಕೋಟಿ ಕೊಟ್ಟಿದ್ದಾರೆ. 13ನೇ ಹಣಕಾಸು ಆಯೋಗದಲ್ಲಿ ಈ ಮೊತ್ತ ಬರೀ ₹ 88,583 ರೂಪಾಯಿ ಇತ್ತು’ ಎಂದು ಹೇಳಿದರು.

ಇದೇ ವೇಳೆ ಅರ್ಕಾವತಿ ಬಡಾವಣೆಯಲ್ಲಿನ ಹಗರಣ, ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲಿನ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ಎಲ್ಲವನ್ನೂ ಪ್ರಸ್ತಾಪಿಸಿ, ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಅಮಿತ್ ಷಾ ಮಾಡಿದ ಹಿಂದಿ ಭಾಷಣವನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಕನ್ನಡಕ್ಕೆ ಅನುವಾದಿಸಿ ಓದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.