ADVERTISEMENT

ಮಣ್ಣಿನ ದಿಬ್ಬ ಕುಸಿದು ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 12:09 IST
Last Updated 10 ಜನವರಿ 2018, 12:09 IST
ಮಣ್ಣಿನ ದಿಬ್ಬ ಕುಸಿದು ಮಹಿಳೆ ಸಾವು
ಮಣ್ಣಿನ ದಿಬ್ಬ ಕುಸಿದು ಮಹಿಳೆ ಸಾವು   

ಬಿಡದಿ (ರಾಮನಗರ): ಇಲ್ಲಿನ ಹೊಸೂರು ಗೊಲ್ಲರಹಳ್ಳಿ ಸಮೀಪ ಬುಧವಾರ ಮಧ್ಯಾಹ್ನ ಜಲ್ಲಿ ಕ್ರಷರ್ ಬಳಿ ರಂಗೋಲಿ ಪುಡಿ ತುಂಬಿಕೊಳ್ಳುವ ಸಂದರ್ಭ ಮಣ್ಣಿನ ದಿಬ್ಬ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡರು.

ಗ್ರಾಮದ ನಿವಾಸಿ ಕೆಂಪಮ್ಮ (50) ಮೃತರು. ಅದೇ ಗ್ರಾಮದವರಾದ ಶೋಭಾ, ಕಮಲಮ್ಮ ಹಾಗೂ ಲತಾ ತೀವ್ರವಾಗಿ ಗಾಯಗೊಂಡಿದ್ದು, ಬಿಡದಿ ಸರ್ಕಾರಿ ಆಸ್ಪತ್ರೆ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮದ ಸಮೀಪ ನಡೆದಿರುವ ರಸ್ತೆ ಕಾಮಗಾರಿಗಾಗಿ ಕ್ರಷರ್ ಪಕ್ಕದ ಜಮೀನನ್ನು ಅಗೆದು ಮಣ್ಣಿನ ರಾಶಿ ಸಂಗ್ರಹಿಸಲಾಗಿತ್ತು. ಅದರ ಕೆಳಗೆ ಇದ್ದ ರಂಗೋಲಿ ಪುಡಿಯನ್ನು ತುಂಬಿಕೊಳ್ಳಲು ಮಧ್ಯಾಹ್ನ 2ರ ಸುಮಾರಿಗೆ ಈ ಮಹಿಳೆಯರು ತೆರಳಿದ್ದರು. ಈ ವೇಳೆ ಏಕಾಏಕಿ ದಿಬ್ಬ ಕುಸಿದು ನಾಲ್ವರೂ ಮಣ್ಣಿನ ಅಡಿ ಸಿಲುಕಿದರು.

ADVERTISEMENT

ಈ ಮಹಿಳೆಯರ ನರಳಾಟ ಕೇಳಿ ಸ್ಥಳೀಯರು ನೆರವಿಗೆ ಧಾವಿಸಿದ್ದು, ಮಣ್ಣನ್ನು ತೆಗೆಯಲು ಶ್ರಮ ಪಟ್ಟರು. ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಅರ್ಧ ಗಂಟೆಗೂ ಹೆಚ್ಚು ಹೊತ್ತಿನ ಬಳಿಕ ಅವರನ್ನು ಹೊರೆತೆಗೆಯಲಾಯಿತು. ಅಷ್ಟರಲ್ಲಿ ಆಗಲೇ ಕೆಂಪಮ್ಮ ಮೃತಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಬಿಡದಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.