ADVERTISEMENT

‘ರಾಮನ ಮೇಲಿನ ಪ್ರೀತಿ ಬಸವನಿಗೇಕಿಲ್ಲ’

ಸ್ವತಂತ್ರ ಧರ್ಮದ ಹೋರಾಟ: ಆರ್‌ಎಸ್ಎಸ್ ಮೌನಕ್ಕೆ ಮಾತೆ ಮಹಾದೇವಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 19:30 IST
Last Updated 12 ಜನವರಿ 2018, 19:30 IST
‘ರಾಮನ ಮೇಲಿನ ಪ್ರೀತಿ ಬಸವನಿಗೇಕಿಲ್ಲ’
‘ರಾಮನ ಮೇಲಿನ ಪ್ರೀತಿ ಬಸವನಿಗೇಕಿಲ್ಲ’   

ಕೂಡಲಸಂಗಮ (ಬಾಗಲಕೋಟೆ): ‘ರಾಮನಿಗಾಗಿ ದೇಶ ಸುಡಲು ಹೊರಟಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಬಸವನ ಅಸ್ಮಿತೆಗಾಗಿ ನಡೆದಿರುವ ಸ್ವತಂತ್ರ ಧರ್ಮ ಹೋರಾಟಕ್ಕೆ ಏಕೆ ಬೆಂಬಲ ನೀಡುತ್ತಿಲ್ಲ’ ಎಂದು ಕೂಡಲಸಂಗಮ ಬಸವ ಧರ್ಮಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಪ್ರಶ್ನಿಸಿದರು.

ಬಸವಧರ್ಮ ಪೀಠ ಹಮ್ಮಿಕೊಂಡಿರುವ ಶರಣಮೇಳದಲ್ಲಿ ಶುಕ್ರವಾರ ‘ಲಿಂಗಾಯತ ಧರ್ಮ ಮಾನ್ಯತೆಗಾಗಿ ರೂಪುರೇಷೆ’ ಕುರಿತು ಅವರು ಮಾತನಾಡಿದರು.

‘ರಾಮಮಂದಿರ ಕಟ್ಟಲು ಆರ್‌ಎಸ್‌ಎಸ್‌ ಉತ್ಸುಕವಾಗಿದೆ. ಆದರೆ, ಭಾರತೀಯ ಸಂಸ್ಕೃತಿಯ ಭಾಗವಾದ ಲಿಂಗಾಯತರ ಸ್ವತಂತ್ರ ಧರ್ಮದ ಹೋರಾಟಕ್ಕೆ ಬೆಂಬಲ ಕೊಡುತ್ತಿಲ್ಲ. ಇಂತಹ ದೊಡ್ಡ ಹೋರಾಟ ನಡೆಯುತ್ತಿದ್ದರೂ ಒಂದು ದಿನವೂ ಬಂದು ಕೇಳಲಿಲ್ಲ. ಅವರಿಗೆ ರಾಮ ಮಾತ್ರ ದೇವರು. ಸಂಗಮೇಶ ಅಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಲಿಂಗಾಯತರ ಸಂಕಷ್ಟಕ್ಕೆ ಆರ್‌ಎಸ್‌ಎಸ್‌ನವರು ಎಂದಿಗೂ ಧ್ವನಿಯಾಗುವುದಿಲ್ಲ. ನಮ್ಮ ರಕ್ಷಣೆ ಮಾಡಿಕೊಳ್ಳುವಷ್ಟು ನಾವು ಸಮರ್ಥರಿದ್ದೇವೆ. ರಾಷ್ಟ್ರೀಯ ಬಸವ ದಳವು ಲಿಂಗಾಯತ ಸಮಾಜದ ಸಂಘಟನೆಯ ಜೊತೆಗೆ ಧಾರ್ಮಿಕ ಸಂಸ್ಕಾರ, ದೇಶ ರಕ್ಷಣೆ ಮಾಡಲಿದೆ’ ಎಂದರು.

‘ಪಂಚಪೀಠಾಧೀಶರು ಜಂಗಮರನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಸರ್ಕಾರಕ್ಕೆ ಮನವಿ ಕೊಟ್ಟಿದ್ದಾರೆ. ಅದೇ ಕಾರಣಕ್ಕೆ ಅವರು, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ವಿರೋಧಿಸುತ್ತಿದ್ದಾರೆ’ ಎಂದು ಹೇಳಿದರು

‘ಮೂರ್ಖರು, ದಡ್ಡರು ಇಲ್ಲ’

‘ದೇಶದ ಸಂವಿಧಾನ, ವಿಶ್ವಸಂಸ್ಥೆಯ ಒಡಂಬಡಿಕೆ ಎಲ್ಲವೂ ಬಸವ ತತ್ವದ ಮೇಲೆಯೇ ನೆಲೆ ನಿಂತಿವೆ. ಬಸವಾದಿ ಶರಣರು ಕೊಟ್ಟ ಧರ್ಮದ ಮಹತ್ವ ಅರಿಯದ ನಮ್ಮ ಲಿಂಗಾಯತರಷ್ಟು ಮೂರ್ಖರು, ಹೇಡಿಗಳು, ದಡ್ಡರು ಈ ಜಗತ್ತಿನಲ್ಲಿಯೇ ಇಲ್ಲ. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ’ ಎಂದು ಸಮಾರಂಭ ಉದ್ಘಾಟಿಸಿದ ಬಿಜೆಪಿ ಮುಖಂಡ ಶಂಕರ ಬಿದರಿ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಹತ್ತಿರ ಬಂದಿರುವುದರಿಂದ ಏನು ಮಾತನಾಡಿದರೂ ರಾಜಕೀಯ ಅರ್ಥ ಕಲ್ಪಿಸುತ್ತಾರೆ. ಇನ್ನು 90 ದಿನ ಕಳೆದ ನಂತರ ಹೋರಾಟ ತೀವ್ರಗೊಳಿಸೋಣ ಎಂದರು.

***
ಚುನಾವಣೆ ಹತ್ತಿರ ಬಂದಿರುವುದರಿಂದ ಏನು ಮಾತನಾಡಿದರೂ ರಾಜಕೀಯ ಅರ್ಥ ಕಲ್ಪಿಸುತ್ತಾರೆ. ಇನ್ನು 90 ದಿನ ಕಳೆದ ನಂತರ ಹೋರಾಟ ತೀವ್ರಗೊಳಿಸೋಣ
- ಶಂಕರ ಬಿದರಿ, ನಿವೃತ್ತ ಪೊಲೀಸ್ ಮಹಾನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.