ADVERTISEMENT

ಮಹಾಸಭಾದಿಂದ ಲಿಂಗಾಯತ ಸಂಸ್ಕೃತಿಗೆ ಧಕ್ಕೆ

ಕೂಡಲಸಂಗಮ ಶರಣ ಮೇಳದಲ್ಲಿ ಮಾತೆ ಮಹಾದೇವಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST
ಮಹಾಸಭಾದಿಂದ ಲಿಂಗಾಯತ ಸಂಸ್ಕೃತಿಗೆ ಧಕ್ಕೆ
ಮಹಾಸಭಾದಿಂದ ಲಿಂಗಾಯತ ಸಂಸ್ಕೃತಿಗೆ ಧಕ್ಕೆ   

ಕೂಡಲಸಂಗಮ (ಬಾಗಲಕೋಟೆ): ‘ಲಿಂಗಾಯತ ಸಮಾಜದ ಸಾಂಸ್ಕೃತಿಕ ಅಸ್ಮಿತೆಯನ್ನು ಹಾಳು ಮಾಡುವ ದುರುದ್ದೇಶದಿಂದಲೇ 1904ರಲ್ಲಿ ಹಾನಗಲ್ ಕುಮಾರಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಮಾಡಿದರು’ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಮಹಾದೇವಿ ಆರೋಪಿಸಿದರು.

ಬಸವಧರ್ಮ ಪೀಠದ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಶರಣ ಮೇಳದಲ್ಲಿ ಶನಿವಾರ ಮೂರನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮಹಾಸಭಾ ಸ್ಥಾಪನೆ ಮೂಲಕ ಲಿಂಗಾಯತ ಎಂಬ ಜೇನುತುಪ್ಪದ ಬಾಟಲಿಗೆ ಔಡಲೆಣ್ಣೆಯ ಸ್ಟಿಕ್ಕರ್ ಹಚ್ಚಿ ಸಮಾಜವನ್ನು ಕೆಡಿಸಲಾಯಿತು. ಇದೀಗ ಲಿಂಗಾಯತ ಎನ್ನುವ ಶುದ್ಧ ನೀರಿನಲ್ಲಿ ಸೇರಿಕೊಂಡಿರುವ ವೀರಶೈವ ಎನ್ನುವ ಕಸ ತೆಗೆದು ಶುದ್ಧೀಕರಿಸಬೇಕಿದೆ. ಹಾಗಾಗಿ ವೀರಶೈವ ಮಹಾಸಭಾದಲ್ಲಿರುವ ಲಿಂಗಾಯತ ಸದಸ್ಯರು ಕೂಡಲೇ ರಾಜೀನಾಮೆ ಸಲ್ಲಿಸಿ ಹೊರಗೆ ಬಂದು ಸ್ವತಂತ್ರಧರ್ಮ ಸ್ಥಾಪನೆ ಹೋರಾಟದಲ್ಲಿ ಕೈ ಜೋಡಿಸಬೇಕು’ ಎಂದು ಹೇಳಿದ ಮಾತೆ ಮಹಾದೇವಿ, ಮಹಾಸಭಾಗೆ ಪರ್ಯಾಯವಾಗಿ ಸ್ಥಾಪನೆಯಾಗುತ್ತಿರುವ ವಿಶ್ವ ಲಿಂಗಾಯತ ಪರಿಷತ್‌ಗೆ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.

ADVERTISEMENT

‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಪರಿಶೀಲನೆಗೆ ಸರ್ಕಾರ ನೇಮಕ ಮಾಡಿರುವ ಸಮಿತಿಯು ವರದಿ ಸಲ್ಲಿಸಲು ಆರು ತಿಂಗಳ ಕಾಲಾವಕಾಶ ಕೇಳಿರುವುದು ಹಾಸ್ಯಾಸ್ಪದ. ಅಷ್ಟರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನಮ್ಮ ಹೋರಾಟಕ್ಕೆ ಖಂಡಿತ ಹಿನ್ನಡೆ ಆಗಲಿದೆ. ಒಂದೂವರೆ ತಿಂಗಳಲ್ಲಿಯೇ ವರದಿ ಸಲ್ಲಿಸುವಂತೆ ಸಮಿತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.