ADVERTISEMENT

ಅಧಿಕೃತವಾಗಿ ಬಟ್ಟೆ ಹಂಚಲು ಕಾಂಗ್ರೆಸ್‌ ತಂತ್ರ: ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
ಅಧಿಕೃತವಾಗಿ ಬಟ್ಟೆ ಹಂಚಲು ಕಾಂಗ್ರೆಸ್‌ ತಂತ್ರ: ಜಗದೀಶ ಶೆಟ್ಟರ್‌
ಅಧಿಕೃತವಾಗಿ ಬಟ್ಟೆ ಹಂಚಲು ಕಾಂಗ್ರೆಸ್‌ ತಂತ್ರ: ಜಗದೀಶ ಶೆಟ್ಟರ್‌   

ಮೈಸೂರು: ‘ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಈಗಲೇ ಸೀರೆ, ವಾಚು, ಮಿಕ್ಸರ್‌ ಹಂಚುತ್ತಿದ್ದಾರೆ. ಚುನಾವಣೆ ಸಂದರ್ಭಗಳಲ್ಲಿ ಅನಧಿಕೃತವಾಗಿ ನಡೆಯುವುದನ್ನು ‘ವಸ್ತ್ರಭಾಗ್ಯ’ ಯೋಜನೆ ಮೂಲಕ ಅಧಿಕೃತಗೊಳಿಸಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಟೀಕಿಸಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವಂತೆ ಕಾಂಗ್ರೆಸ್‌ಗೆ ಬಡವರು ನೆನಪಾಗುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಉಚಿತವಾಗಿ ಸೀರೆ, ಶರ್ಟ್‌, ಧೋತಿ ವಿತರಿಸಲು ‘ವಸ್ತ್ರಭಾಗ್ಯ’ ಜಾರಿಗೆ ತಂತ್ರ ರೂಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಇಂದಿರಾ ಕ್ಯಾಂಟೀನ್ ಬಗ್ಗೆ ಮಾತನಾಡಿದರೆ ಬಡವರ ವಿರೋಧಿ ಎನ್ನುತ್ತಾರೆ. ಹೀಗಾಗಿ, ಮೌನ ವಹಿಸಿದ್ದೇವೆ. ಅಧಿಕಾರಕ್ಕೆ ಬಂದ ಆರಂಭಿಕ ದಿನಗಳಲ್ಲಿ ಏಕೆ ಕ್ಯಾಂಟೀನ್‌ ಆರಂಭಿಸಲಿಲ್ಲ ಎಂದು ಪ್ರಶ್ನಿಸಿದರು.

ADVERTISEMENT

‘ರಾಹುಲ್‌ ಗಾಂಧಿ ಸೇರಿದಂತೆ ಯಾರೇ ಬಂದರೂ ರಾಜ್ಯದಲ್ಲಿ ನಿರ್ಮಾಣವಾಗಿರುವ ಬಿಜೆಪಿ ಅಲೆ ತಡೆಯಲು ಸಾಧ್ಯವಿಲ್ಲ. ನರೇಂದ್ರ ಮೋದಿ, ಅಮಿತ್‌ ಷಾ ಅವರು ರಾಜ್ಯಕ್ಕೆ ಬಂದಾಗಲೆಲ್ಲ ಸಿದ್ದರಾಮಯ್ಯ ಭಯಭೀತರಾಗುತ್ತಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡು ಆರ್‌ಎಸ್‌ಎಸ್‌, ಬಜರಂಗದಳದವರನ್ನು ಉಗ್ರಗಾಮಿಗಳು ಎಂದು ಟೀಕಿಸುತ್ತಿದ್ದಾರೆ. ಉಗ್ರಗಾಮಿಗಳಾಗಿದ್ದರೆ ಸಾಕ್ಷ್ಯ ತೋರಿಸಲಿ’ ಎಂದು ಸವಾಲು ಹಾಕಿದರು.

ಕಡಿಮೆ ದರದಲ್ಲಿ ತಿಂಡಿ, ಊಟ ವಿತರಿಸಲು ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಸ್‌.ಎಂ.ಶಿವಪ‍್ರಕಾಶ್‌ ಸ್ಥಾಪಿಸಿರುವ ಕ್ಯಾಂಟೀನ್‌ ಅನ್ನು ಅವರು ಉದ್ಘಾಟಿಸಿದರು.

ಅಕ್ರಮ ಗಣಿಗಾರಿಕೆ ಸಂಬಂಧ ಕೂಡಲೇ ತನಿಖೆ ನಡೆಸಬೇಕು. ಮುಖ್ಯಮಂತ್ರಿ ಸೇರಿದಂತೆ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಬೇಕು

ಜಗದೀಶ ಶೆಟ್ಟರ್‌,ವಿರೋಧ ಪಕ್ಷದ ನಾಯಕ

ಇಂದಿರಾ ಕ್ಯಾಂಟೀನ್‌ ವಿಚಾರದಲ್ಲಿ ಸರ್ಕಾರವು ರಾಮ–ಕೃಷ್ಣರ ಲೆಕ್ಕ ತೋರಿಸುತ್ತಿದೆ. 2–3 ತಿಂಗಳಲ್ಲಿ ಈ ಕ್ಯಾಂಟೀನ್‌ಗಳು ಬಾಗಿಲು ಮುಚ್ಚಲಿವೆ

ವಿ.ಸೋಮಣ್ಣ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.