ADVERTISEMENT

‘ಕದಡಿದ ನೀರಲ್ಲಿ ರಾಜಕಾರಣಿಗಳ ಈಜಾಟ’

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST
‘ಕದಡಿದ ನೀರಲ್ಲಿ ರಾಜಕಾರಣಿಗಳ ಈಜಾಟ’
‘ಕದಡಿದ ನೀರಲ್ಲಿ ರಾಜಕಾರಣಿಗಳ ಈಜಾಟ’   

ಬೆಂಗಳೂರು: ‘ಕದಡಿದ ನೀರಲ್ಲಿ ರಾಜಕಾರಣಿಗಳು ಈಜಾಡಲು ಅವಕಾಶ ಮಾಡಿಕೊಟ್ಟಿರುವ ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ನಡೆ ಸರಿಯಲ್ಲ’ ಎಂದು ಹೈಕೋರ್ಟ್‌ನ ಹಿರಿಯ ವಕೀಲ ಬಿ.ವಿ.ಆಚಾರ್ಯ ಟೀಕಿಸಿದ್ದಾರೆ.

ಸುಪ್ರಿಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕಾರ್ಯಶೈಲಿ ವಿರುದ್ಧ ಇತ್ತೀಚೆಗಷ್ಟೇ ಅಪಸ್ವರ ಎತ್ತಿರುವ ನ್ಯಾಯಮೂರ್ತಿಗಳಾದ ಜೆ.ಚಲಮೇಶ್ವರ, ರಂಜನ್ ಗೊಗೊಯ್‌, ಜೋಸೆಫ್‌ ಕುರಿಯನ್‌ ಮತ್ತು ಮದನ್‌ ಬಿ. ಲೋಕೂರ್ ಅವರ ಮಾಧ್ಯಮ ಗೋಷ್ಠಿಗೆ ಪ್ರತಿಕ್ರಿಯಿಸಿರುವ ಆಚಾರ್ಯ, ‘ಹಿರಿಯ ಸಹೋದ್ಯೋಗಿಗಳ ಯೋಗ್ಯ ಸಲಹೆಗಳನ್ನು ಮುಖ್ಯ ನ್ಯಾಯಮೂರ್ತಿ ಅಷ್ಟು ಸುಲಭವಾಗಿ ತಳ್ಳಿ ಹಾಕಬಾರದು. ತಮ್ಮ ಅಧಿಕಾರವನ್ನು ಮಿತಿ ಮೀರದಂತೆ ಚಲಾಯಿಸಬೇಕು. ಎಲ್ಲವನ್ನೂ ನಾನೇ ತೀರ್ಮಾನ ಮಾಡುತ್ತೇನೆ ಎಂಬ ವರ್ತನೆ ಸರಿಯಲ್ಲ’ ಎಂದು ಹೇಳಿದ್ದಾರೆ.

‘ಸದ್ಯದ ಸಮಸ್ಯೆಯನ್ನು ಮುಖ್ಯ ನ್ಯಾಯಮೂರ್ತಿ ಮತ್ತು ಚಲಮೇಶ್ವರ ಅವರ ತಂಡ ಚರ್ಚೆ ಮುಖಾಂತರ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಇದರಿಂದ ಕಳೆಗುಂದಿರುವ ನ್ಯಾಯಾಂಗದ ಘನತೆಯನ್ನು ಕನಿಷ್ಠ ಮಟ್ಟಕ್ಕಾದರೂ ಒಂದಷ್ಟು ಮರುಕಳಿಸಬಹುದು’ ಎಂದಿದ್ದಾರೆ.

ADVERTISEMENT

ರಾಜಕೀಯ ಪಕ್ಷಗಳ ಕೈಗೊಂಬೆ: ‘ನ್ಯಾಯಮೂರ್ತಿ ಚಲಮೇಶ್ವರ ಅವರ ತಂಡವು ತಮ್ಮ ಸ್ವಾರ್ಥಕ್ಕಾಗಿ ಸುಪ್ರೀಂ ಕೋರ್ಟ್‌ನ ಘನತೆ–ಗೌರವ ಹಾಳು ಮಾಡಿದೆ’ ಎಂದು ‘ಕರ್ನಾಟಕ ರಾಜ್ಯ ವಕೀಲರ ಸಂಘ’ದ ಅಧ್ಯಕ್ಷ ಪಿ.ಪಿ.ಹೆಗ್ಡೆ ಆರೋಪಿಸಿದ್ದಾರೆ.

ರಾಜ್ಯ ವಕೀಲರ ಪರಿಷತ್‌ ಮಾಜಿ ಅಧ್ಯಕ್ಷರೂ ಆದ ಹೆಗ್ಡೆ, ‘ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣ ಹಾಗೂ ರಾಜಕೀಯ ವಿಚಾರಗಳ ಬಗ್ಗೆ ನ್ಯಾಯಮೂರ್ತಿಗಳು ಸಾರ್ವಜನಿಕ ಚರ್ಚೆಗೆ ಇಳಿಯಬಾರದು. ಯಾವುದೇ ಮಾಧ್ಯಮಗಳಿಗೆ ಸಂದರ್ಶನ ನೀಡಬಾರದು ಎಂಬ ನ್ಯಾಯಮೂರ್ತಿಗಳ ನೀತಿ ಸಂಹಿತೆ–1999ನ 8 ಮತ್ತು 9ನೇ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ’ ಎಂದು ಹೇಳಿದ್ದಾರೆ.

(ಪಿ.ಪಿ.ಹೆಗ್ಡೆ)

‘ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಮಾಧ್ಯಮದ ಮುಂದೆ ಬಂದು ತಮ್ಮ ಸಂಕಟ ಹೇಳಿಕೊಂಡಿರುವಾಗ ನಾವೇನು ಕಮ್ಮಿ ಎಂದು ಹೈಕೋರ್ಟ್‌ ನ್ಯಾಯಮೂರ್ತಿಗಳೂ ಬಹಿರಂಗ ಹೇಳಿಕೆಗೆ ಮುಂದಾಗಬಹುದು. ಆದ್ದರಿಂದ ಭವಿಷ್ಯದಲ್ಲಿ ಇಂತಹ ನಡವಳಿಕೆ ಮರುಕಳಿಸದಂತೆ ಇದಕ್ಕೆ ಶಾಶ್ವತ ಕಡಿವಾಣ ಹಾಕುವ ದಿಸೆಯಲ್ಲಿ ಕ್ರಮ ಕೈಗೊಳ್ಳಲು ದಾವೆಯಲ್ಲಿ ಪ್ರಾರ್ಥಿಸಲಾಗುವುದು’ ಎಂದು ಹೆಗ್ಡೆ ತಿಳಿಸಿದ್ದಾರೆ.

ಹಿಡಿತ ಸಾಧಿಸುವ ಯತ್ನ: ‘ನಮ್ಮ ಪ್ರಜಾಪ್ರಭುತ್ವದ ಶೇ.90 ಭಾಗವನ್ನು ಸರಿಯಾಗಿ ನಡೆಸುತ್ತಿರುವುದೇ ನ್ಯಾಯಾಂಗ. ಈ ನ್ಯಾಯಾಂಗವನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂಬುದೇ’ ಕೇಂದ್ರ ಬಿಜೆಪಿ ಸರ್ಕಾರದ ಹುನ್ನಾರ ಎಂದು ಸುಪ್ರೀಂ ಕೋರ್ಟ್‌ ವಕೀಲ ರಹಮತ್ ಉಲ್ಲಾ ಕೊತ್ವಾಲ್‌ ಆತಂಕ ವ್ಯಕ್ತಪಡಿಸಿದ್ದಾರೆ.

‘ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ದೇಶದ ವಿವಿಧ ಹೈಕೋರ್ಟ್‌ಗಳಿಗೆ ನೇಮಕವಾಗಬೇಕಾದ 74 ನ್ಯಾಯಮೂರ್ತಿಗಳ ಶಿಫಾರಸು ಪಟ್ಟಿಯನ್ನು ತಡೆ ಹಿಡಿದದ್ದು ಇದೇ ಕಾರಣಕ್ಕೇ’ ಎಂದೂ ಅವರು ಹೇಳಿದ್ದಾರೆ.

‘ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರನ್ನು ಉಪಯೋಗಿಸಿಕೊಂಡು ಕೇಂದ್ರ ಸರ್ಕಾರ ತನ್ನ ಹಿಡಿತ ಬಿಗಿಗೊಳಸಲು ಪ್ರಯತ್ನಿಸಿದೆ’ ಎಂದು ಕೊತ್ವಾಲ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.