ADVERTISEMENT

ಒಳಮೀಸಲಾತಿಗೆ ಒಮ್ಮತ

ಸದಾಶಿವ ಆಯೋಗದ ವರದಿ ಜಾರಿಗೆ ಬಲಗೈ ಸಮುದಾಯ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 19:57 IST
Last Updated 15 ಜನವರಿ 2018, 19:57 IST
ಒಳಮೀಸಲಾತಿಗೆ ಒಮ್ಮತ
ಒಳಮೀಸಲಾತಿಗೆ ಒಮ್ಮತ   

ಬೆಂಗಳೂರು: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಯತಾವತ್‌ ಅನುಷ್ಠಾನಕ್ಕೆ ಪರಿಶಿಷ್ಟ ಜಾತಿಯ ಬಲಗೈ ಬಣ ಒಪ್ಪಿಗೆ ಸೂಚಿಸಿದೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಪರಿಶಿಷ್ಟ ಜಾತಿಯ ಎಡಗೈ ಹಾಗೂ ಬಲಗೈ ಬಣಗಳ ಮುಖಂಡರ ಜೊತೆ ಸಿದ್ದರಾಮಯ್ಯ ಸೋಮ
ವಾರ ಸಂಜೆ ನಡೆಸಿದ ಮಾತುಕತೆ ಸಫಲವಾಗಿದ್ದು, ಎರಡೂ ಸಮುದಾಯಗಳ ಮುಖಂಡರು ಒಮ್ಮತಕ್ಕೆ ಬಂದರು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ‘ಬಲಗೈ ಮತ್ತು ಎಡಗೈ ಸಮುದಾಯದವರು ಒಂದೇ ತಾಯಿಯ ಮಕ್ಕಳಿದ್ದಂತೆ. ಮೀಸಲಾತಿಯನ್ನು ಜಾರಿಗೆ ಬಂದ ದಿನದಿಂದ ಒಟ್ಟಾಗಿಯೇ ಮೀಸಲಾತಿ ಪಡೆದಿದ್ದೇವೆ. ಹಂಚಿಕೆ ಸಂದರ್ಭದಲ್ಲಿ ಕಿತ್ತಾಡಿಕೊಳ್ಳುವುದು ಬೇಡ. ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿ ಎಂದು ಬಲಗೈ ಸಮುದಾಯದ ಮುಖಂಡರೇ ಮುಖ್ಯಮಂತ್ರಿಗೆ ತಿಳಿಸಿದರು’ ಎಂದು ವಿವರಿಸಿದರು.

ADVERTISEMENT

‘ಕಾಲಹರಣ ಮಾಡಿದರೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಷ್ಟವಾಗಲಿದೆ. ಅದಕ್ಕೆ ಅವಕಾಶ ನೀಡದೆ ಕೂಡಲೇ ಕಾನೂನು ತಜ್ಞರ ಅಭಿಪ್ರಾಯ ಪಡೆದು 15 ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದೂ ಎರಡೂ ಸಮುದಾಯದ ಮುಖಂಡರು ಒತ್ತಾಯಿಸಿದರು’ ಎಂದೂ
ಹೇಳಿದರು.

ವರದಿಯ ಪ್ರಕಾರ ಬಲಗೈ ಸಮುದಾಯಕ್ಕೆ ಶೇ 5ರಷ್ಟು ಮತ್ತು ಎಡಗೈ ಸಮುದಾಯಕ್ಕೆ ಶೇ 6ರಷ್ಟು ಮೀಸಲಾತಿ ಸಿಗಲಿದೆ. ಕಾನೂನಿನಲ್ಲಿ ಅವಕಾಶ ಇದ್ದರೆ ತಲಾ ಶೇ 5.5ರಷ್ಟು ಹಂಚಿಕೆ ಮಾಡುವಂತೆ ಕೆಲವರು ಸಲಹೆ ನೀಡಿದರು ಎಂದೂ ಆಂಜನೇಯ ವಿವರಿಸಿದರು.

‘ಇದಕ್ಕೆ ಮುಖ್ಯಮಂತ್ರಿ ಒಪ್ಪಿದ್ದು, ಕಾಲಮಿತಿ ನಿಗದಿ ಮಾಡುವುದು ಬೇಡ. ಈ ವಿಷಯದಲ್ಲಿ ನಿಮಗಿಂತಲೂ ಹೆಚ್ಚು ಬದ್ಧತೆ ಮತ್ತು ತುರ್ತು ನನಗಿದೆ. ಕಾನೂನು ತಜ್ಞರ ಅಭಿಪ್ರಾಯ ಬಂದ ಕೂಡಲೇ ಸಚಿವ ಸಂಪುಟ ಸಭೆ ಕರೆದು ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ನಿರ್ಧಾರ ಕೈಗೊಳ್ಳುತ್ತೇನೆ ಎಂಬ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

‘ವರದಿಯಲ್ಲಿರುವ ಅಂಶಗಳನ್ನು ಬದಲಿಸಿ ತಲಾ ಶೇ 5.5ರಷ್ಟು ಮೀಸಲಾತಿ ಹಂಚಿಕೆ ಮಾಡಲು ನನಗೆ ಅಧಿಕಾರ ಇಲ್ಲ. ಸಾಧ್ಯವಿದೆಯೋ ಇಲ್ಲವೋ ಎಂಬುದರ ಬಗ್ಗೆಯೂ ಕಾನೂನು ತಜ್ಞರ ಸಲಹೆ ಪಡೆಯುವುದಾಗಿ ತಿಳಿಸಿದ್ದಾರೆ’ ಎಂದು ಅವರು ತಿಳಿಸಿದರು

ಎರಡೂ ಸಮುದಾಯಗಳ ಸಂಸದರು ಮತ್ತು ಶಾಸಕರ ಸಭೆಯನ್ನು ಮತ್ತೊಮ್ಮೆ ಕರೆಯುತ್ತೇವೆ. ಅವರನ್ನೂ ಒಪ್ಪಿಸಿ ಆದಷ್ಟು ಬೇಗ
ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ವಿವರಿಸಿದರು.

ಒಳ ಮೀಸಲಿಗೆ ವಿರೋಧ ಇಲ್ಲ

‘ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲದ ಕಾರಣಕ್ಕೆ ಬಲಗೈ ಸಮುದಾಯ ವಿರೋಧ ವ್ಯಕ್ತಪಡಿಸಿತ್ತು. ಬಹಿರಂಗವಾದ ಬಳಿಕ ನಮಗೆ ಅನ್ಯಾಯ ಆಗುವುದಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ವರದಿ ಅನುಷ್ಠಾನಕ್ಕೆ ಒಪ್ಪಿದ್ದೇವೆ’ ಎಂದು ಚಲವಾದಿ ಮಹಾಸಭಾದ ಅಧ್ಯಕ್ಷ ಕುಮಾರ್ ತಿಳಿಸಿದರು.

‘ಮೀಸಲಾತಿ ಹಂಚಿಕೆಗೆ ಕಿತ್ತಾಡಿಕೊಂಡರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಲಿದೆ. ಮುಂದಿನ ಪೀಳಿಗೆಯಲ್ಲಿ ದ್ವೇಷ ಬೆಳೆಯುತ್ತದೆ. ಅದಕ್ಕೆ ಅವಕಾಶ ಆಗಬಾರದು ಎಂಬ ಕಾರಣಕ್ಕೆ ಎರಡೂ ಸಮುದಾಯಗಳ ಮುಖಂಡರು ಒಟ್ಟಿಗೆ ಕುಳಿತು ಚರ್ಚಿಸಿ ಈ ತೀರ್ಮಾನಕ್ಕೆ ಬಂದಿದ್ದೇವೆ’ ಎಂದು ಅವರು ವಿವರಿಸಿದರು.

* ವರದಿ ಜಾರಿಗೆ ಬಲಗೈ ಸಮುದಾಯದ ಮುಖಂಡರೇ ಒಪ್ಪಿದ್ದಾರೆ. ಹೀಗಾಗಿ ಸರ್ಕಾರ ತಡ ಮಾಡದೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು

–ಸಿದ್ದರಾಜು, ಆದಿ ಜಾಂಬವ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.