ADVERTISEMENT

ಬಾಲ ಬಡಿಯುವವರಿಂದ ಸಾಂಸ್ಕೃತಿಕ ನೀತಿ ನಿಯಂತ್ರಣ

ಸಾಹಿತ್ಯ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಗಿರಡ್ಡಿ ಆತಂಕ

ಇ.ಎಸ್.ಸುಧೀಂದ್ರ ಪ್ರಸಾದ್
Published 19 ಜನವರಿ 2018, 19:45 IST
Last Updated 19 ಜನವರಿ 2018, 19:45 IST
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಶುಕ್ರವಾರದಿಂದ ಆರಂಭವಾದ 6ನೇ ಆವೃತ್ತಿಯ ಧಾರವಾಡ ಸಾಹಿತ್ಯ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಗಿರೀಶ ಕಾರ್ನಾಡ, ರಾಮಚಂದ್ರ ಗುಹಾ ಹಾಗೂ ಡಾ. ಗಿರಡ್ಡಿ ಗೋವಿಂದರಾಜ ನಡುವಿನ ಗಹನ ಚರ್ಚೆ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಶುಕ್ರವಾರದಿಂದ ಆರಂಭವಾದ 6ನೇ ಆವೃತ್ತಿಯ ಧಾರವಾಡ ಸಾಹಿತ್ಯ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಗಿರೀಶ ಕಾರ್ನಾಡ, ರಾಮಚಂದ್ರ ಗುಹಾ ಹಾಗೂ ಡಾ. ಗಿರಡ್ಡಿ ಗೋವಿಂದರಾಜ ನಡುವಿನ ಗಹನ ಚರ್ಚೆ ಚಿತ್ರ: ಬಿ.ಎಂ.ಕೇದಾರನಾಥ   

ಧಾರವಾಡ: ‘ರಾಜಕೀಯ ಪಕ್ಷವೊಂದರ ಬಾಲ ಬಡಿಯುತ್ತಾ ಶಾಸನ ಸಭೆ, ಪ್ರಾಧಿಕಾರ ಹಾಗೂ ಅಕಾಡೆಮಿಗಳಂಥ ಆಯಕಟ್ಟಿನ ಸ್ಥಾನ ಆಕ್ರಮಿಸಿ
ಕೊಂಡಿರುವ ಚಿಕ್ಕ ಗುಂಪು ನಮ್ಮ ಸರ್ಕಾರದ ಸಾಂಸ್ಕೃತಿಕ ನೀತಿಯನ್ನು ನಿಯಂತ್ರಿಸುತ್ತಿದೆ’ ಎಂದು ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ ಅಧ್ಯಕ್ಷ
ಡಾ. ಗಿರಡ್ಡಿ ಗೋವಿಂದರಾಜ ಅಭಿಪ್ರಾಯಪಟ್ಟರು.

’ಪ್ರಜಾವಾಣಿ’ ಸೇರಿದಂತೆ ಹಲವು ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರದಿಂದ ಆರಂಭವಾದ 6ನೇ ಆವೃತ್ತಿಯ ಸಾಹಿತ್ಯ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

‘ಕಳೆದ ಬಾರಿ ಸಂಭ್ರಮದಲ್ಲಿ ನಡೆದ ಅಚಾತುರ್ಯ ಘಟನೆ ಎಡ ಹಾಗೂ ಬಲಪಂಥಗಳು ಅತಿರೇಕಕ್ಕೆ ಹೋಗಿರುವ ಅಸಹಿಷ್ಣುತೆಗೆ ನಿದರ್ಶನವಾಗಿತ್ತು. ಈ ಚರ್ಚೆ ಹಲವು ದಿನಗಳವರೆಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇತ್ತು. ಸಂಭ್ರಮದ ಸಂಘಟಕರು ಎಡಪಂಥೀಯರು ಎಂದು ಬಲದವರು ಹಾಗೂ ಬಲಪಂಥೀಯರು ಎಂದು ಎಡದವರು ಟೀಕಿಸಿದ್ದು ಹಾಸ್ಯಾಸ್ಪದವಾಗಿತ್ತು’ ಎಂದರು.

ADVERTISEMENT

‘ಎಲ್ಲಾ ಪಂಥಗಳಿಗೆ ಸೇರಿದವರನ್ನೂ ಆಹ್ವಾನಿಸಿ ಪಂಥ–ಪಂಥಗಳ ನಡುವೆ ಅನುಸಂಧಾನ ನಡೆಯಲಿ ಎಂಬುದು ನಮ್ಮ ಆಶಯ. ಆದರೆ ಎರಡೂ ಪಂಥಗಳು ಅದಕ್ಕೆ ಸಿದ್ಧವಿಲ್ಲ. ಇದರ ನಡುವೆ ಯಾವ ಪಂಥಗಳಿಗೂ ಸೇರದ ಹಾಗೂ ಸ್ವತಂತ್ರ ಆಲೋಚನೆಯುಳ್ಳ ದೊಡ್ಡ ಜನವರ್ಗದಿಂದಾಗಿ ತನ್ನ ಅಸ್ತಿತ್ವಕ್ಕೆ ಕುಂದುಬರುತ್ತಿದೆ ಎಂದು ಅಳುಕಿರುವ ಈ ಪಂಥಗಳು ಹೊಸ ವರ್ಗದ ಅಸ್ತಿತ್ವವನ್ನೇ ಅಲ್ಲಗಳೆಯುತ್ತಿರುವುದು ವಿಪರ್ಯಾಸದ ಸಂಗತಿ ’ ಎಂದು ಬೇಸರ ವ್ಯಕ್ತಪಡಿಸಿದರು.

‘ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದು ಎರಡೂವರೆ ವರ್ಷ ಕಳೆದರೂ ಪೊಲೀಸ್ ಇಲಾಖೆಗೆ ಹಂತಕರ ಯಾವ ಸುಳಿವೂ ಸಿಗದಿರುವುದು ಯಾರಿಗೂ ಗೌರವ ತರುವ ಸಂಗತಿಯಲ್ಲ. ಗೌರಿ ಲಂಕೇಶರ ಹತ್ಯೆಯ ತನಿಖೆಯೂ ಅದೇ ಹಾದಿ ಹಿಡಿದಿದೆ. ಆದರೆ ಡಾ. ಕಲಬುರ್ಗಿ ಹೆಸರಿನಲ್ಲಿ ಸಂಶೋಧನಾ ಕೇಂದ್ರ ತೆರೆಯಲು ಸರ್ಕಾರ ಎರಡು ವರ್ಷಗಳ ಹಿಂದೆ ತೆಗೆದಿರಿಸಿದ್ದ ₹2 ಕೋಟಿ ಹಣ ಹಾಗೂ ಕೇಂದ್ರದ ಕುರಿತು ಯಾವುದೇ ಪ್ರಸ್ತಾಪವಿಲ್ಲ’ ಎಂದು ಗಿರಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

‘ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಅಸಹಿಷ್ಣುತೆಯ ವಾತಾವರಣ ಸೃಷ್ಟಿಯಾಗಿದೆ. ಹೀಗಾದರೆ ಮುಂದೆ ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ. ಪ್ರಜಾಪ್ರಭುತ್ವದ ಅಭಿವ್ಯಕ್ತಿ ಸ್ವಾತಂತ್ರ್ಯದ ಆರೋಗ್ಯಕ್ಕೆ ಇವು ಯಾವುವೂ ಒಳ್ಳೆಯದಲ್ಲ ಎಂದು ಹೇಳುವುದು ಅನಿವಾರ್ಯವಾಗಲಿದೆ’ ಎಂದು ಹೇಳಿದರು.

**

‘ಸಾಹಿತ್ಯ ಸಂಭ್ರಮ’ದ ಪ್ರಾಮಾಣಿಕ ಪ್ರಯತ್ನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಬಲಿಸಬೇಕು. ಇಲ್ಲವಾದಲ್ಲಿ ಸಂಭ್ರಮ ನಿಲ್ಲಿಸುವುದು ಅನಿವಾರ್ಯ.

–ಡಾ. ಗಿರಡ್ಡಿ ಗೋವಿಂದರಾಜ ಅಧ್ಯಕ್ಷ, ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.